ಮೂಡುಬಿದಿರೆ : ಪ್ರವಾಸಿ ಮಂದಿರ ಅಕ್ರಮ ಚಟುವಟಿಕೆಗಳ ಅಡ್ಡೆ – ಅಮಾನತುಗೊಂಡ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಲೋಕಾಯುಕ್ತಕ್ಕೆ ದೂರು

0
17

ಮೂಡುಬಿದಿರೆ : ಇಲ್ಲಿನ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರವನ್ನು (IB) ಕಾನೂನುಬಾಹಿರ ಹಾಗೂ ಅನೈತಿಕ ಚಟುವಟಿಕೆಗಳ ಅಡ್ಡೆಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ, ಲೋಕಾಯುಕ್ತರಿಗೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ. ಕಾರ್ಕಳ ತಾಲೂಕಿನ ಕಾಸಬಾ ಗ್ರಾಮದ ನಿವಾಸಿ ಸುಮತಿ ನಾಯ್ಕ್ ಎಂಬುವರು ಈ ಕುರಿತು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ಮಂಗಳೂರಿನ ಕಾನೂನು ಪ್ರಾಧಿಕಾರಕ್ಕೆ ಅಧಿಕೃತ ದೂರು ರವಾನಿಸಿದ್ದಾರೆ.

ದೂರಿನಲ್ಲಿಸಿರುವ ಪ್ರಮುಖ ಆರೋಪಗಳು:

ಅಮಾನತುಗೊಂಡ ಅಧಿಕಾರಿಯಿಂದ ಸರ್ಕಾರಿ ಆಸ್ತಿ ದುರುಪಯೋಗ:

ದುರ್ನಡತೆಯ ಕಾರಣಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಮೂಡಬಿದ್ರೆ ಪೊಲೀಸ್ ಠಾಣೆಯ ಮಾಜಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರು ಸರ್ಕಾರಿ ಪ್ರವಾಸಿ ಮಂದಿರವನ್ನು ತಮ್ಮ ವೈಯಕ್ತಿಕ ನಿವಾಸದಂತೆ ಬಳಸಿಕೊಳ್ಳುತ್ತಿದ್ದಾರೆ. ಅಮಾನತಿನಲ್ಲಿದ್ದರೂ ಹಗಲು-ರಾತ್ರಿ ಪ್ರವಾಸಿ ಮಂದಿರದಲ್ಲೇ ತಂಗಿದ್ದು, ಕಾನೂನುಬಾಹಿರ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜೂಜು, ಮದ್ಯಪಾನ ಹಾಗೂ ಅನೈತಿಕ ದಂದೆ:

ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಇಸ್ಪೀಟು ಜೂಜು, ಅಕ್ರಮ ಮದ್ಯಪಾನ, ರಿಯಲ್ ಎಸ್ಟೇಟ್ ದಂದೆ ಹಾಗೂ ರೋಲ್-ಕಾಲ್ (ವಸೂಲಾತಿ) ಮುಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಅಕ್ರಮಗಳಲ್ಲಿ ಕೆಲ ಕಿಡಿಗೇಡಿಗಳು ಭಾಗಿಯಾಗಿದ್ದು, ಸಾರ್ವಜನಿಕ ಆಸ್ತಿಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಲೋಕೋಪಯೋಗಿ (PWD) ಅಧಿಕಾರಿಗಳ ಶಾಮೀಲಾತಿ:

ಸರ್ಕಾರಿ ಪ್ರವಾಸಿ ಮಂದಿರದ ನಿರ್ವಹಣೆ ವಹಿಸಿಕೊಂಡಿರುವ ಲೋಕೋಪಯೋಗಿ ಇಲಾಖೆಯ (PWD) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (AEE) ಹಾಗೂ ಪ್ರವಾಸಿ ಮಂದಿರದ ಸಿಬ್ಬಂದಿಗಳು ಈ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ.

ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಆತಂಕ:

ಸರ್ಕಾರಿ ನಿಯಮಗಳಂತೆ ಕಟ್ಟುನಿಟ್ಟಾಗಿ ನಿರ್ವಹಿಸಬೇಕಾದ ಜಾಗವನ್ನು ಅಕ್ರಮ ಅಡ್ಡೆಯನ್ನಾಗಿ ಮಾಡಿರುವುದರಿಂದ, ಇಲ್ಲಿಗೆ ಭೇಟಿ ನೀಡಲು ಗೌರವಾನ್ವಿತ ಮಹಿಳಾ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಕ್ಕಳು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ದೂರುದಾರರ ಪ್ರಮುಖ ಆಗ್ರಹಗಳು:

ಮೂಡಬಿದ್ರೆ ಪ್ರವಾಸಿ ಮಂದಿರದ ಸಿ.ಸಿ.ಟಿ.ವಿ. (CCTV) ಫುಟೇಜ್‌ಗಳನ್ನು ತಕ್ಷಣವೇ ವಶಕ್ಕೆ ಪಡೆದು ನಿಷ್ಪಕ್ಷಪಾತ ತನಿಖೆ ನಡೆಸಬೇಕು.

ಸರ್ಕಾರಿ ಸ್ವತ್ತನ್ನು ದುರುಪಯೋಗಪಡಿಸಿಕೊಂಡ ಅಮಾನತುಗೊಂಡ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಹಾಗೂ ಅವರಿಗೆ ಸಹಕರಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಸರ್ಕಾರಿ ಭೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ಸಂಬಂಧಪಟ್ಟವರಿಂದಲೇ ವಸೂಲಿ ಮಾಡಬೇಕು.