ಮೂಡುಬಿದಿರೆ : ಧರ್ಮಸ್ಥಳ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಆಸಕ್ತರಿಗೆ ಮಾಹಿತಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡಂಗಲ್ಲು ಇಲ್ಲಿ ಜೂನ್ 18ರಂದು ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಹಿರಿಯ ಪತ್ರಕರ್ತ ರಾಯಿ ರಾಜ ಕುಮಾರರು ಆಗಮಿಸಿದ್ದರು. ಶಿಕ್ಷಣದಲ್ಲಿ ಪೋಷಕರ ಪ್ರಾಮುಖ್ಯತೆಯನ್ನು ತಿಳಿಸುತ್ತಾ ಸುರಕ್ಷಿತ ಹಾಗೂ ನೈತಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆ ಆಗಲು ಸಾಧ್ಯವಿದೆ. ಮನೆ ಹಾಗೂ ಶಾಲೆಯ ಪ್ರತಿಯೊಂದು ಕೆಲಸಗಳನ್ನು ಸೃಜನಶೀಲವಾಗಿ ಕಲಿಯುತ್ತಾ ಬೆಳೆದಂತೆ ಕಲ್ಪನಾ ಶಕ್ತಿ ವೃದ್ಧಿಸಿ ಜ್ಞಾನದ ವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಹಲವಾರು ಉದಾಹರಣೆಗಳ ಮೂಲಕ ಮನದಟ್ಟು ಮಾಡಿಸಿದರು. ಪ್ರೀತಿ ವಿಶ್ವಾಸದಿಂದ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಪೋಷಕರು ಪ್ರಯತ್ನಿಸ ಬೇಕಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹದಿ ಹರೆಯದ ವಿಷಯದ ಬಗ್ಗೆ, ಮಕ್ಕಳಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ-ಗೆಳತಿ ವಿಭಾಗದ ಯೋಜನಾಧಿಕಾರಿ ಸುಮಿತ್ರ ಜೈನ್ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಸೆಲಿನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಹರಿಣಾಕ್ಷಿ, ಹಾಜರಿದ್ದರು. ಜ್ಞಾನವಿಕಾಸ ತಾಲ್ಲೂಕು ಸಮನ್ವಯಾಧಿಕಾರಿ ವಿನುತಾ ಸ್ವಾಗತಿಸಿದರು. ಶಿಕ್ಷಕಿ ರತ್ನ ಕಾರ್ಯಕ್ರಮ ನಿರ್ವಹಿಸಿದರು.

