ಮಂಗಳೂರು: ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ ಮಾಡಿದೆ. ಕೊಲೆಯ ಹಿಂದೆ ಕಾಣದ ಕೈಗಳ ಕುತಂತ್ರ ಇದೆ. 50 ಲಕ್ಷ ರೂಪಾಯಿಗೂ ಹೆಚ್ಚು ಫಂಡ್ ಮಾಡಲಾಗಿದೆ. ಬಜ್ಪೆ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಶೀದ್ ಕೂಡ ಕೃತ್ಯದಲ್ಲಿ ಪರೋಕ್ಷವಾಗಿ ಕೈಜೋಡಿಸಿದ ಅನುಮಾನವಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಕೆಟಿ ಉಲ್ಲಾಸ್ ಆರೋಪ ಮಾಡಿದ್ದಾರೆ.
ಸುಹಾಸ್ ಕೊಲೆ ಸಂಬಂಧ ಬಂಧನವಾಗಿರುವ ಆರೋಪಿಗಳು ನೈಜ ಆರೋಪಿಗಳು ಹೌದೇ ಎಂಬ ಬಗ್ಗೆ ಸುಹಾಸ್ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಸಂಬಂಧ ನಮಗೂ ಒಂದಿಷ್ಟು ಅನುಮಾನಗಳಿವೆ. ಈ ಹತ್ಯೆ ಫಾಜಿಲ್ ಕೊಲೆಗೆ ಪ್ರತೀಕಾರ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ, ಈ ಪ್ರಕರಣದ ಹಿಂದೆ ಕೇವಲ ಫಾಜಿಲ್ ತಮ್ಮ ಮಾತ್ರ ಇಲ್ಲ. ದೊಡ್ಡ ಶಕ್ತಿಯೊಂದು ಇದಕ್ಕೆ 50 ಲಕ್ಷ ರೂಪಾಯಿಗೂ ಹೆಚ್ಚು ಫಂಡ್ ಮಾಡಿರುವ ಅನುಮಾನ ಇದೆ. ನಿಷೇಧಿತ ಪಿಎಫ್ಐ ಸಂಘಟನೆ ಮೇಲೆ ಅನುಮಾನ ಇದೆ. ಈ ಹಿಂದೆ ಮಾಡುತ್ತಿದ್ದ ಟಾರ್ಗೆಟ್ ಕಿಲ್ಲಿಂಗ್ ಈ ಕೇಸ್ನಲ್ಲೂ ಗೋಚರಿಸುತ್ತಿದೆ ಎಂದು ಕೆಟಿ ಉಲ್ಲಾಸ್ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಗೆ ಮೊದಲು ಸಾಮಾನ್ಯ ಮುಸ್ಲಿಂ ಒಬ್ಬನ ಹತ್ಯೆಯಾಗಿತ್ತು. ಇದೀಗ ಅಶ್ರಫ್ ಕೊಲೆ ನಡೆದ ಬೆನ್ನಲ್ಲೇ ಸುಹಾಸ್ ಹತ್ಯೆಯಾಗಿದೆ. ಇಲ್ಲಿ ಪಿಎಫ್ಐ ಮಾಡೆಲ್ ಕೆಲಸ ಮಾಡುತ್ತಿದೆ. ಹತ್ಯೆ ನಡೆಸಿ ಕಾರನ್ನೇರಿ ಹೋಗುವಾಗ ಅವಸರ ಕಂಡುಬರುತ್ತಿರಲಿಲ್ಲ. ಸುಹಾಸ್ ಸಾಯುತ್ತಾನೆ ಎಂದು ಖಾತ್ರಿ ಆದ ಬಳಿಕ ಆರಾಮವಾಗಿ ಹೋಗಿದ್ದಾರೆ. ಅಲ್ಲಿ ನೆರೆದವರೆಲ್ಲ ಇವರ ಜನರೇ ಆಗಿರಬೇಕು. ಪಹಲ್ಗಾಮ್ನಲ್ಲಿ ಸ್ಥಳೀಯರ ಕೈವಾಡ ಇದ್ದಂತೆಯೇ ಇಲ್ಲಿಯೂ ಸ್ಥಳೀಯರು ಸಹಕರಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಬುರ್ಖಧಾರಿ ಮಹಿಳೆಯರು ಸಹಾಯ ಮಾಡಿದ್ದಾರೆ. ಅಲ್ಲಿ ಇದ್ದವರಿಗೆಲ್ಲಾ ಈ ಘಟನೆ ಆಗುತ್ತದೆ ಎಂಬುದು ಎಂದು ಮೊದಲೇ ಗೊತ್ತಿದ್ದಂತೆ ಕಾಣಿಸುತ್ತಿದೆ. ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಗಳಾದ ಮುಸ್ತಫಾ, ಕಬೀರ್ ಅಲ್ಲಿ ಇದ್ದರು ಎಂಬ ಮಾಹಿತಿ ಇದೆ. ಸುಖಾನಂದ ಶೆಟ್ಟಿ ಹತ್ಯೆ ಮಾಡಿದ ಆರೋಪಿ ಈ ಹತ್ಯೆಗೆ ಫಂಡಿಂಗ್ ಮಾಡಿರುವ ಅನುಮಾನವಿದೆ. ಪ್ರಕರಣದ ಪ್ರಮುಖ ಆರೋಪಿ ಸಫ್ವಾನ್ ಬಾಡಿಗೆಯಿದ್ದ ಮನೆ ಪಿಎಫ್ಐ ಕಾರ್ಯಕರ್ತನದ್ದಾಗಿದೆ ಎಂದು ಕೆಟಿ ಉಲ್ಲಾಸ್ ಹೇಳಿದ್ದಾರೆ.