ನವದೆಹಲಿ: ಮನೆ ಕೆಲಸದವನೇ ಮಹಿಳೆ ಹಾಗೂ ಆಕೆಯ ಮಗನ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಲಜಪತ್ ನಗರದಲ್ಲಿ ನಡೆದಿದೆ.
ಕೆಲಸದವನಿಗೆ ರುಚಿಕಾ ಸೇವಾನಿ ಗದರಿಸಿದ್ದರಿಂದ ಕೋಪಗೊಂಡು ಇಬ್ಬರ ಕತ್ತು ಸೀಳಿ ಪರಾರಿಯಾಗಿದ್ದಾನೆ. ಬುಧವಾರ ರಾತ್ರಿ 9.30ರ ಸುಮಾರಿಗೆ ರುಚಿಕಾ ಅವರ ಪತಿ ಕುಲದೀಪ್ ಕೆಲಸದಿಂದ ಹಿಂದಿರುಗಿದಾಗ ಬಾಗಿಲು ಲಾಕ್ ಆಗಿತ್ತು. ಪತ್ನಿ ಹಾಗೂ ಮಗನಿಗೆ ಕರೆ ಮಾಡಿದ್ದಾರೆ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬರಲಿಲ್ಲ. ಕುಲದೀಪ್ ಸೇವಾನಿ ಗೇಟ್ ಬಳಿ ಮತ್ತು ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳನ್ನು ಸಹ ನೋಡಿ ಗಾಬರಿಗೊಂಡು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಆಘಾತಕಾರಿ ದೃಶ್ಯ ಕಂಡುಬಂದಿತು. 42 ವರ್ಷದ ರುಚಿಕಾ ಹಾಸಿಗೆಯ ಪಕ್ಕದಲ್ಲಿ ನೆಲದ ಮೇಲೆ ಮಲಗಿದ್ದರು. ಆಕೆಯ ಶರ್ಟ್ ರಕ್ತದಿಂದ ತೊಯ್ದು ಹೋಗಿತ್ತು ಮತ್ತು ಆಕೆಯ ತಲೆಯ ಸುತ್ತಲೂ ರಕ್ತ ಮಡುಗಟ್ಟಿತ್ತು. ಮಗ ಕ್ರಿಶ್, ಬಾತ್ರೂಮನ್ನ ನೆಲದ ಮೇಲೆ ನಿರ್ಜೀವವಾಗಿ ಬಿದ್ದಿದ್ದ, ಸುತ್ತಲೂ ರಕ್ತ ಹೆಪ್ಪುಗಟ್ಟಿತ್ತು. ರುಚಿಕಾ ಸೇವಾನಿ ತಮ್ಮ ಪತಿಯೊಂದಿಗೆ ಲಜಪತ್ ನಗರ ಮಾರುಕಟ್ಟೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು.
ಈ ಜೋಡಿ ಕೊಲೆಗೆ ಸಂಬಂಧಿಸಿದಂತೆ ಅಂಗಡಿಯಲ್ಲಿ ಸೇವಾನಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದ ಮತ್ತು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮುಖೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಗರದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಮುಖೇಶ್, ರುಚಿಕಾ ಸೇವಾನಿ ಮತ್ತು ಆಕೆಯ ಮಗ ತನ್ನನ್ನು ಗದರಿಸಿದ್ದರಿಂದ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಪೊಲೀಸರು ಪ್ರಕರಣ ಮತ್ತು ಕೊಲೆಗೆ ನಿಖರವಾದ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ.