ಚಕ್ರಧರಪುರ (ಜಾರ್ಖಂಡ್), ಮೇ 22: ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಭೀಕರ ಘಟನೆ ಹೌರಾ-ಬಾರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಹೆತ್ತ ತಾಯಿಯೇ ತನ್ನ ಒಂದೂವರೆ ತಿಂಗಳ ಹಸುಗೂಸನ್ನು ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ಹೊರಗೆಸೆದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೈಲ್ವೆ ಹಳಿಯ ಮೇಲೆ ಬಿದ್ದ ಶಿಶು ಸ್ಥಳದಲ್ಲೇ ಛಿದ್ರಗೊಂಡು ಮೃತಪಟ್ಟಿದೆ.
ಚಕ್ರಧರಪುರ ರೈಲ್ವೆ ವಿಭಾಗದ ರಾಜ್‌ಖರ್ಸವಾನ್ ಮತ್ತು ಮಹಲಿಮ್‌ರೂಪ್ ನಿಲ್ದಾಣಗಳ ನಡುವೆ ಈ ಅಮಾನವೀಯ ಘಟನೆ ನಡೆದಿದೆ. ಘಟನೆಯ ಬಳಿಕ ರೈಲ್ವೆ ರಕ್ಷಣಾ ಪಡೆ (RPF) ಕಾರ್ಯಾಚರಣೆ ನಡೆಸಿ ಶಿಶುವಿನ ಮೃತದೇಹವನ್ನು ಪತ್ತೆ ಮಾಡಿದ್ದು, ಆರೋಪಿಯಾಗಿರುವ ತಾಯಿಯನ್ನು ವಶಕ್ಕೆ ಪಡೆದಿದೆ.
ಪ್ರಯಾಣಿಕರ ಸಮಯಪ್ರಜ್ಞೆಯಿಂದ ಮತ್ತೊಂದು ಮಗುವಿನ ಜೀವ ಉಳಿವು
ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲಿನಲ್ಲಿ ಎಲ್ಲವೂ ಸಾಮಾನ್ಯವಾಗಿದ್ದ ಸಂದರ್ಭದಲ್ಲಿ ಮಹಿಳೆ ಏಕಾಏಕಿ ಸೀಟಿನಿಂದ ಎದ್ದು, ತನ್ನ ಕಂಕುಳಲ್ಲಿ ಮಲಗಿದ್ದ ಹಸುಗೂಸನ್ನು ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ಹೊರಗೆಸೆದಿದ್ದಾಳೆ. ಈ ದೃಶ್ಯ ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ, ತನ್ನ ಮೂರು ವರ್ಷದ ಮತ್ತೊಂದು ಮಗುವನ್ನೂ ಕಿಟಕಿಯಿಂದ ಹೊರಗೆ ತಳ್ಳಲು ಆಕೆ ಯತ್ನಿಸಿದ್ದಾಳೆ. ತಕ್ಷಣ ಎಚ್ಚೆತ್ತ ಸಹ ಪ್ರಯಾಣಿಕರು ಮಹಿಳೆಯನ್ನು ಹಿಂದಕ್ಕೆ ಎಳೆದು ಹಿಡಿದು, ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಳಿಯ ಪಕ್ಕದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಶಿಶುವಿನ ಮೃತದೇಹ ಪತ್ತೆ
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಆರ್‌ಪಿಎಫ್ ಸಿಬ್ಬಂದಿ ಹಳಿಗಳ ಉದ್ದಕ್ಕೂ ಶೋಧ ಕಾರ್ಯಾಚರಣೆ ನಡೆಸಿದರು. ಸುಮಾರು ಒಂದು ಗಂಟೆಯ ಹುಡುಕಾಟದ ಬಳಿಕ, ಹಳಿಯ ಪಕ್ಕದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಈ ದೃಶ್ಯ ಸ್ಥಳದಲ್ಲಿದ್ದ ಪೊಲೀಸರಿಗೂ ಸಾರ್ವಜನಿಕರಿಗೂ ಮನಕಲಕುವಂತಿತ್ತು.
ತಾಯಿ ವಿರುದ್ಧ ಪ್ರಕರಣ ದಾಖಲು
ಆರೋಪಿ ಮಹಿಳೆಯನ್ನು ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಮಜ್‌ಗಾಂವ್ ನಿವಾಸಿ ಮುದ್ರಾವತಿ ಗೋಪೆ ಅಲಿಯಾಸ್ ಹಸೀನಾ ಬೇಗಂ ಎಂದು ಗುರುತಿಸಲಾಗಿದೆ. ಪತಿ ಶಹಾಬುದ್ದೀನ್ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಶಹಾಬುದ್ದೀನ್ ಮುದ್ರಾವತಿಯನ್ನು ಅಪಹರಿಸಿದ್ದ ಪ್ರಕರಣವೂ ದಾಖಲಾಗಿತ್ತು. ಬಳಿಕ ಇಬ್ಬರೂ ವಿವಾಹವಾಗಿ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ದಂಪತಿ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಮಕ್ಕಳೊಂದಿಗೆ ತವರಿಗೆ ಮರಳುವಾಗ ಈ ದುರಂತ ಸಂಭವಿಸಿದೆ.
ಮಾನಸಿಕ ಅಸ್ಥಿರತೆ ಶಂಕೆ
ಚೈಬಾಸಾ ರೈಲ್ವೆ ನಿಲ್ದಾಣದಲ್ಲಿ ದಂಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಪ್ರಾಥಮಿಕ ತನಿಖೆಯ ಪ್ರಕಾರ ಮಹಿಳೆ ತೀವ್ರ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದು ಚೈಬಾಸಾ ರೈಲ್ವೆ ಇನ್ಸ್‌ಪೆಕ್ಟರ್ ಪಿ.ಪಿ. ಸುರಿನ್ ತಿಳಿಸಿದ್ದಾರೆ.

