ಮನೆಯ ಬಾಲ್ಕನಿಯಲ್ಲಿ ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ..!

0
32

ಬೆಳಗಾವಿ : ಬೆಳಗಾವಿ ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಪ್ರತಿಷ್ಠಿತ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರನ್ನು ಡಾ. ದಿನೇಶ್ ಲಕ್ಷ್ಮಣ ಭಟ್ಕಳ (79) ಎಂದು ಗುರುತಿಸಲಾಗಿದೆ. ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾಗಿದ್ದು, ಹಲವು ವರ್ಷಗಳಿಂದ KLE Hospital ನಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೂಲಗಳ ಪ್ರಕಾರ, ಡಾ. ದಿನೇಶ್ ಅವರು ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಮಾನಸಿಕವಾಗಿ ತೀವ್ರ ಕುಗ್ಗಿದ್ದ ಅವರು ಖಿನ್ನತೆಯಲ್ಲಿದ್ದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ಎಂದಿನಂತೆ ಮನೆಯಲ್ಲಿದ್ದ ಅವರು, ಕೆಲ ಸಮಯದ ಬಳಿಕ ಮನೆಯ ಬಾಲ್ಕನಿಗೆ ತೆರಳಿ ತಮ್ಮ ಬಳಿಯಿದ್ದ ಗನ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಮನೆಯವರು ಸ್ಥಳಕ್ಕೆ ಧಾವಿಸಿದಾಗ, ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಟಿಳಕವಾಡಿ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವೇ ತಿಳಿಯಬೇಕಿದೆ.

ಹಿರಿಯ ವೈದ್ಯರ ಈ ದಾರುಣ ಸಾವಿನ ಸುದ್ದಿ ಬೆಳಗಾವಿ ವೈದ್ಯಕೀಯ ವಲಯ ಹಾಗೂ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ.

LEAVE A REPLY

Please enter your comment!
Please enter your name here