ಬೇರೆಯವರ ಬೆಂಬಲ ನಿರೀಕ್ಷಿಸದೆ ಸ್ವಂತ ಶಕ್ತಿಯಿಂದ ಮುನ್ನಡೆಯಿರಿ : ಪ್ರಸಾದ್ ಬಿ.ಎಸ್

0
7

ಉಜಿರೆ : ಉದ್ಯಮದಲ್ಲಿ ಯಶಸ್ಸು ಸಾಧಿಸಲು ಬೇರೆಯವರ ಬೆಂಬಲವನ್ನು ನಿರೀಕ್ಷಿಸದೆ ಸ್ವಂತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ಉಜಿರೆಯ *”ರಮ್ಯ ಫ್ಯಾನ್ಸ್”* ಮಾಲಕರು ಹಾಗೂ ಉಜಿರೆ ವರ್ತಕರ ಸಂಘದ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್ ಅವರು ಹೇಳಿದರು.

ಅವರು ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಯಲ್ಲಿ ಆಯೋಜಿಸಲಾದ ಸಿ.ಸಿ. ಕ್ಯಾಮೆರಾ ಅಳವಡಿಸುವಿಕೆ ಮತ್ತು ಸರ್ವಿಸ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು. ತಮ್ಮ ಉದ್ಯಮ ಪಯಣದ ಅನುಭವಗಳನ್ನು ಹಂಚಿಕೊಂಡ ಅವರು, ಉದ್ಯಮದ ಬೆಳವಣಿಗೆ, ಸವಾಲುಗಳನ್ನು ಎದುರಿಸುವ ಬಗೆ ಹಾಗೂ ಯಶಸ್ಸಿನ ಸೂತ್ರಗಳ ಕುರಿತು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯ ಕುಮಾರ್ ಅವರು ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಂಡು ಉದ್ಯಮದಲ್ಲಿ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.

ತರಬೇತಿಯ ಅತಿಥಿ ಉಪನ್ಯಾಸಕಾರದ ಗುರುರಾಜ್ ಕೆ.ಎಸ್ ಅವರು ಮಾತನಾಡಿ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಸಂಸ್ಥೆಯ ನಿರ್ದೇಶಕರಾದ ಸುನಿಲ್ ಜಿ. ನಾಯ್ಕೆ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.  ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ರಮೇಶ್, ನಿಖಿಲ್ ಹಾಗೂ ಜಗನ್ನಾಥ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ಜಗದೀಶ್ ಹಾಗೂ ಅಶೋಕ್ ಅವರು ತರಬೇತಿಯ ಅನುಭವಗಳನ್ನು ಹಂಚಿಕೊಂಡರು.