ಎಂಆರ್‌ಪಿಎಲ್‌ ಸ್ಫೋಟ: ಸುರಕ್ಷತಾ ಲೋಪದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಐವನ್‌ ಡಿʼಸೋಜಾ ಆಗ್ರಹ

0
11

ಎಂಆರ್‌ಪಿಎಲ್‌ ಎಂ.ಡಿ. ಭೇಟಿ, ಮೃತ ಮನೀಶ್‌ ಕರ್ಕಡ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಒತ್ತಾಯ

ಮಂಗಳೂರು : ಎಂಆರ್‌ಪಿಎಲ್‌ ಘಟಕದಲ್ಲಿ ಸಂಭವಿಸಿದ ಸ್ಫೋಟ ಹಾಗೂ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಘಟನೆಯ ಕಾರಣ ಹಾಗೂ ಸುರಕ್ಷತಾ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಪತ್ತೆಹಚ್ಚಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿʼಸೋಜಾ ಆಗ್ರಹಿಸಿದರು.

ಘಟನೆಯ ಹಿನ್ನೆಲೆಯಲ್ಲಿ ಐವನ್‌ ಡಿʼಸೋಜಾ ಅವರು ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮ್‌ ಪ್ರಸಾದ್‌ ಕಾಮತ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಳಿಕ ಸ್ಫೋಟ ಸಂಭವಿಸಿದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಘಟಕದಲ್ಲಿನ ಸುರಕ್ಷತಾ ವ್ಯವಸ್ಥೆ, ಕಾರ್ಮಿಕರ ಸುರಕ್ಷತೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಎಂಆರ್‌ಪಿಎಲ್‌ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸ್ಫೋಟದಲ್ಲಿ ಮೃತಪಟ್ಟ ಮನೀಶ್‌ ಕರ್ಕಡ ಅವರ ಕುಟುಂಬಕ್ಕೆ ಎಂಆರ್‌ಪಿಎಲ್‌ ವತಿಯಿಂದ ಗರಿಷ್ಠ ಮಟ್ಟದ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಐವನ್‌ ಡಿʼಸೋಜಾ ಅವರು ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದರು.

ಅವಘಡದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಮಸೀದಿ, ಚರ್ಚ್‌, ಭಜನಾಮಂದಿರ ಹಾಗೂ ಹಲವು ಮನೆಗಳಿಗೆ ಹಾನಿಯಾಗಿರುವ ಕುರಿತು ಸ್ಥಳ ಪರಿಶೀಲನೆ ನಡೆಸಿದ ಅವರು, ಸಂಭವಿಸಿರುವ ಆಸ್ತಿ–ಪಾಸ್ತಿ ನಷ್ಟಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಶಾಂತಿಗುಡ್ಡೆ ಪ್ರದೇಶಕ್ಕೂ ಭೇಟಿ ನೀಡಿದ ಐವನ್‌ ಡಿʼಸೋಜಾ ಅವರಿಗೆ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ವಿವರಿಸಿ ಮನವಿ ಸಲ್ಲಿಸಿದರು. ಸ್ಫೋಟದಂತಹ ಘಟನೆಗಳಿಂದ ಉಂಟಾಗುವ ತೀವ್ರ ಶಬ್ದ ಹಾಗೂ ಇತರ ಪರಿಣಾಮಗಳಿಂದಾಗಿ ಇಲ್ಲಿ ವಾಸಿಸಲು ಕಷ್ಟವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದರು. ಶಾಂತಿಗುಡ್ಡೆ ಪ್ರದೇಶವನ್ನು ಎಂಆರ್‌ಪಿಎಲ್‌ ಭೂಸ್ವಾಧೀನಪಡಿಸಿಕೊಂಡು ಬಫರ್‌ ವಲಯವಾಗಿ ಬಳಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.

ಈ ಕುರಿತು ಜಿಲ್ಲಾಧಿಕಾರಿಯವರಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ ಐವನ್‌ ಡಿʼಸೋಜಾ, ಈ ಹಿಂದೆ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಈ ಭಾಗದ 104 ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪರ್ಯಾಯ ಜಾಗ ಒದಗಿಸುವ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಈ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಈ ಕುರಿತು ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದರು.

ಬಳಿಕ ಮೃತ ಮನೀಶ್‌ ಕರ್ಕಡ ಅವರ ಅಂತಿಮ ದರ್ಶನ ಪಡೆದ ಐವನ್‌ ಡಿʼಸೋಜಾ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ದುಃಖದ ಈ ಸಂದರ್ಭದಲ್ಲಿ ಕುಟುಂಬದೊಂದಿಗೆ ತಾವು ನಿಲ್ಲುವುದಾಗಿ ತಿಳಿಸಿದರು.

ಎಂಆರ್‌ಪಿಎಲ್‌ ಘಟನೆಯ ಸಂಪೂರ್ಣ ತನಿಖೆ ನಡೆಸಿ, ಕಾರ್ಮಿಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕ್ಯಾಥೋಲಿಕ್‌ ಸಭಾದ ಸಂತೋಷ್‌ ಡಿಸೋಜಾ, ಸ್ಟ್ಯಾನಿ ಲೋಬೋ, ಮಾಜಿ ಕಾರ್ಪೊರೇಟರ್‌ ಭಾಸ್ಕರ್‌ ರಾವ್‌, ಕಾಂಗ್ರೆಸ್‌ ಮುಖಂಡರಾದ ಮನೀಷ್‌ ಬೋಳಾರ್‌, ಬ್ರಿಸ್ಟನ್‌ ರೋಡ್ರಿಗಸ್‌, ಸ್ಥಳೀಯರಾದ ಕೃಷ್ಣರಾಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.