ನವದೆಹಲಿ : ದೇಶದ ಅತಿದೊಡ್ಡ ಡಿಜಿಟಲ್ ಮತ್ತು ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಬಹುನಿರೀಕ್ಷಿತ ಐಪಿಒ (Initial Public Offering) ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಮುಕೇಶ್ ಅಂಬಾನಿ, ಜಿಯೋ ಪ್ಲಾಟ್‌ಫಾರ್ಮ್ಸ್‌ನ ಡಿಆರ್‌ಎಚ್‌ಪಿ (DRHP) ಅನ್ನು ಸೆಬಿಗೆ ಸಲ್ಲಿಸಲಾಗುತ್ತಿದ್ದು, ಐಪಿಒಗೆ ಸಂಸ್ಥೆಯ ನಿರ್ದೇಶಕ ಮಂಡಳಿಯ ಅನುಮೋದನೆ ದೊರೆತಿದೆ ಎಂದು ಘೋಷಿಸಿದರು.
ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಐಪಿಒ ಮೂಲಕ 27 ಕೋಟಿ ಹೊಸ ಈಕ್ವಿಟಿ ಷೇರುಗಳನ್ನು ಬಿಡುಗಡೆ ಮಾಡಲಿದ್ದು, ಇದು ಸಂಪೂರ್ಣವಾಗಿ ‘ಫ್ರೆಶ್ ಇಶ್ಯೂ’ ಆಗಿರಲಿದೆ. ಪ್ರತಿ ಷೇರಿನ ಮುಖಬೆಲೆ ₹10 ನಿಗದಿಪಡಿಸಲಾಗಿದೆ. ಈ ಮೂಲಕ ಸಂಗ್ರಹವಾಗುವ ಬಂಡವಾಳವನ್ನು ಸಂಸ್ಥೆಯ ವಿಸ್ತರಣೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಡಿಜಿಟಲ್ ಸೇವೆಗಳ ಬಲವರ್ಧನೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಮಾರುಕಟ್ಟೆ ತಜ್ಞರ ಅಂದಾಜಿನ ಪ್ರಕಾರ, ಈ ಐಪಿಒ ಮೂಲಕ ಸುಮಾರು ₹37,000 ಕೋಟಿ ಬಂಡವಾಳ ಸಂಗ್ರಹಿಸುವ ಸಾಧ್ಯತೆಯಿದ್ದು, ಇದು ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.
ಡಿಜಿಟಲ್ ಸೇವೆಗಳು, ಟೆಲಿಕಾಂ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಜಿಯೋ ಹೊಂದಿರುವ ಪ್ರಭಾವವನ್ನು ಗಮನಿಸಿದರೆ, ಈ ಐಪಿಒ ಹೂಡಿಕೆದಾರರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಜಿಯೋ ಷೇರು ಮಾರುಕಟ್ಟೆಗೆ ಕಾಲಿಡುತ್ತಿರುವುದು ಭಾರತದ ಡಿಜಿಟಲ್ ಆರ್ಥಿಕತೆಯ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

