ಮುಲ್ಕಿ : ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಜಂಕ್ಷನ್ ಬಳಿ ಆಟೋ ಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು ಆಟೋ ಚಾಲಕ ಕೆಎಸ್ ರಾವ್ ನಗರ ನಿವಾಸಿ ರಮೇಶ್ (26)ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾನೆ.
ಮುಲ್ಕಿಯಕೆಎಸ್ ರಾವ್ ನಗರದಿಂದ ಮುಲ್ಕಿ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ಆಟೋ ಗೆ ಕಾರ್ನಾಡ್ ಜಂಕ್ಷನ್ ಬಳಿ ಹೆದ್ದಾರಿ ಯು ಟರ್ನ್ ಮಾಡಿ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಆಟೋ ಸೀನಮಿಯ ಮಾದರಿಯಲ್ಲಿ ಮೂರು ಬಾರಿ ಪಲ್ಟಿಯಾಗಿದೆ. ಈ ಸಂದರ್ಭ ಆಟೋದಲ್ಲಿದ್ದ ಚಾಲಕ ಕೆಎಸ್ ರಾವ್ ನಗರ ನಿವಾಸಿ ರಮೇಶ್ ಪವಾಡ ಸದೃಶ ಪಾರಾಗಿದ್ದಾನೆ.
ಅಪಘಾತದಿಂದ ಕಾರಿನ ಎದುರು ಭಾಗಕ್ಕೆ ಹಾನಿಯಾಗಿದ್ದು, ನೂತನವಾಗಿ ಖರೀದಿಸಿದ್ದ ಆಟೋ ಕೂಡ ಜಖಂ ಗೊಂಡಿದೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿದ್ದು ಸ್ಥಳೀಯರು ವಾಹನಗಳನ್ನು ಅಪಘಾತ ಸ್ಥಳದಿಂದ ತೆರವುಗೊಳಿಸಲು ಸಹಕರಿಸಿದ್ದಾರೆ.
ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಜಂಕ್ಷನ್ ತೀರಾ ಅಪಾಯಕಾರಿಯಾಗಿ ಪರಿಣಮಿಸಿದ್ದು ಅನೇಕ ಅಪಘಾತಗಳು ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಬೈಪಾಸ್ ಬಳಿಯಿಂದ ಬರುತ್ತಿರುವ ವಾಹನಗಳು ಕಾರ್ನಾಡ್ ವೃತ್ತದ ಬಳಿ ಏಕಾಏಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಗೆ ತಿರುವು ಪಡೆಯುತ್ತಿದ್ದು ಎದುರಿನಿಂದ ಬರುತ್ತಿರುವ ವಾಹನಗಳು ಗೋಚರಿಸದೆ ಅಪಘಾತ ಸಂಭವಿಸುತ್ತಿದೆ . ಕೂಡಲೇ ಕಾರ್ನಾಡ್ ವೃತ್ತದ ಬಳಿ ಅಪಘಾತ ನಿಯಂತ್ರಿಸಲು ರಸ್ತೆ ತಡೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರಾದ ಕಿಶೋರ್ ಟೈಲರ್ ಆಗ್ರಹಿಸಿದ್ದಾರೆ.

