ಕರ್ನಾಟಕದಲ್ಲೇ 47,500 ಯಶಸ್ವಿ ಶಸ್ತ್ರಚಿಕಿತ್ಸೆ, ಸಮಸ್ಯೆಯ ಆರಂಭಿಕ ಪತ್ತೆಗೆ ಸಂಸ್ಥೆಯ ಹೊಸ ಆದ್ಯತೆ
ಬೆಂಗಳೂರು: ದೇಶದ ಶಸ್ತ್ರಚಿಕಿತ್ಸಾ ರಂಗದಲ್ಲಿ ಮಹತ್ತರ ಮೈಲಿಗಲ್ಲೊಂದನ್ನು ಸ್ಥಾಪಿಸಿರುವ ಸ್ಮೈಲ್ ಟ್ರೈನ್ ಇಂಡಿಯಾ ಸಂಸ್ಥೆಯು, ಕರ್ನಾಟಕದ ತನ್ನ 7 ಸಕ್ರಿಯ ಪಾಲುದಾರ ಆಸ್ಪತ್ರೆಗಳ ಜಾಲದ ಮೂಲಕ ರಾಜ್ಯದಲ್ಲಿ ಇದುವರೆಗೆ 47,500 ಕ್ಕೂ ಹೆಚ್ಚು ಉಚಿತ ಸೀಳುತುಟಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರ ಬೆನ್ನಲ್ಲೇ, ಕೇವಲ ಚಿಕಿತ್ಸೆಯಷ್ಟೇ ಅಲ್ಲದೆ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವಿಕೆ ಮತ್ತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯಕ್ಕೆ ಸಂಸ್ಥೆ ಈಗ ಹೆಚ್ಚಿನ ಒತ್ತು ನೀಡಿದೆ.
ಸ್ಮೈಲ್ ಟ್ರೈನ್ ಸಂಸ್ಥೆಯು, ಪ್ರತಿ ವರ್ಷ ಜುಲೈ 20 ರಂದು ಜಾಗತಿಕವಾಗಿ ಆಚರಿಸಲಾಗುವ ವಿಶ್ವ ಸೀಳುತುಟಿ ಜಾಗೃತಿ ದಿನವನ್ನು (ಡಬ್ಲ್ಯೂಸಿಎಡಿ), ಸೀಳುತುಟಿ ಮತ್ತು ಸೀಳುಅಂಗುಳಿನ ಸಮಸ್ಯೆಯನ್ನು ಮುಖ್ಯವಾಹಿನಿಯ ಸಾರ್ವಜನಿಕ ಆರೋಗ್ಯ ಚರ್ಚೆಯನ್ನಾಗಿಸಲು ಹಾಗೂ ಈ ಸಮಸ್ಯೆಯಿರುವ ಪ್ರತಿ ಮಗುವಿಗೂ ಸಕಾಲಿಕ, ಸಮಗ್ರ ಚಿಕಿತ್ಸೆ ದೊರಕಿಸುವ ಉದ್ದೇಶದಿಂದ ಸೀಳು ತುಟಿ ಜಾಗೃತಿ ದಿನ ಆಚರಣೆಯನ್ನು 2025 ರಲ್ಲಿ ಆರಂಭಿಸಿತ್ತು. ಈ ಕ್ಷೇತ್ರದಲ್ಲಿ ದೇಶದ ಮುಂಚೂಣಿ ಸ್ವಯಂಸೇವಾ ಸಂಸ್ಥೆಯಾಗಿರುವ ಸ್ಮೈಲ್ ಟ್ರೈನ್ ಇಂಡಿಯಾ, 2000 ನೇ ಇಸವಿಯಿಂದ ಇದುವರೆಗೆ ದೇಶಾದ್ಯಂತ ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚು ಉಚಿತ ಶಸ್ತ್ರಚಿಕಿತ್ಸೆಗಳನ್ನು ಕೈಗೊಂಡು ಅಭೂತಪೂರ್ವ ಸಾಧನೆ ಮಾಡಿದೆ. ಈ ಯಶಸ್ಸಿನ ಉತ್ತೇಜನದೊಂದಿಗೆ, ಸೀಳುತುಟಿಯೊಂದಿಗೆ ಜನಿಸುವ ಪ್ರತಿ ಮಗುವನ್ನೂ ಮೊದಲೇ ಗುರುತಿಸಿ, ಅವರು ಆರೋಗ್ಯವಂತ ಜೀವನ ನಡೆಸಲು ಪೂರಕ ವಾತಾವರಣ ನಿರ್ಮಿಸುವ ಮಹತ್ಕಾರ್ಯಕ್ಕೆ ಸಂಸ್ಥೆ ಮುನ್ನುಡಿ ಬರೆದಿದೆ.
ಭಾರತದಲ್ಲಿ ಪ್ರತಿವರ್ಷ ಸುಮಾರು 35,000 ಮಕ್ಕಳು ಸೀಳುತುಟಿ ಸಮಸ್ಯೆಯೊಂದಿಗೆ ಜನಿಸುತ್ತಿದ್ದರೂ, ಸಮಾಜದಲ್ಲಿರುವ ಮೂಢನಂಬಿಕೆಗಳು, ತಪ್ಪು ಮಾಹಿತಿ ಮತ್ತು ಕಳಂಕದ ಕಾರಣದಿಂದಾಗಿ ಅನೇಕ ಪೋಷಕರು ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲು ವಿಫಲರಾಗುತ್ತಿದ್ದಾರೆ. ಚಿಕಿತ್ಸೆ ವಿಳಂಬವಾಗುವುದರಿಂದ ಮಗುವಿಗೆ ಹಾಲುಣಿಸಲು ತೊಂದರೆ, ಅಪೌಷ್ಟಿಕತೆ, ಮಾತು ಮತ್ತು ಶ್ರವಣ ದೋಷ ಸೇರಿದಂತೆ ದೀರ್ಘಕಾಲೀನ ಸಾಮಾಜಿಕ ಹಾಗೂ ಭಾವನಾತ್ಮಕ ಸವಾಲುಗಳು ಎದುರಾಗುತ್ತವೆ. ಹೀಗಾಗಿ, ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಗುರುತಿಸಿ, ಸಕಾಲಿಕ ಶಸ್ತ್ರಚಿಕಿತ್ಸೆ ನೀಡುವುದು ಮಗುವಿನ ಸಮಗ್ರ ಬೆಳವಣಿಗೆಗೆ ಅತ್ಯಂತ ಪ್ರಮುಖವಾಗಿದೆ.
ಸ್ಮೈಲ್ ಟ್ರೈನ್ ಇಂಡಿಯಾ ಶಸ್ತ್ರಚಿಕಿತ್ಸೆಯನ್ನು ಕೇವಲ ಒಂದು ಚಿಕಿತ್ಸೆಯಾಗಿ ನೋಡದೆ, ಮಗುವಿನ ಸಂಪೂರ್ಣ ಆರೈಕೆಯ ಭಾಗವಾಗಿ ಪರಿಗಣಿಸುತ್ತದೆ. ಇದರ ಸಮಗ್ರ ಚಿಕಿತ್ಸಾ ಮಾದರಿಯಲ್ಲಿ ಪೌಷ್ಟಿಕಾಂಶದ ಬೆಂಬಲ, ಸ್ಪೀಚ್ ಥೆರಪಿ (ಮಾತು ತರಬೇತಿ) ಮತ್ತು ದಂತ ಚಿಕಿತ್ಸೆಗಳು ಸೇರಿವೆ. ಸುಸ್ಥಿರ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವ ಭಾಗವಾಗಿ, ಸಂಸ್ಥೆಯು ಸ್ಥಳೀಯ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ದಾದಿಯರು ಮತ್ತು ವೈದ್ಯಕೀಯ ತಂಡಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಅವರನ್ನು ಸಬಲೀಕರಿಸುತ್ತಿದೆ. ಇದರಿಂದಾಗಿ ಗ್ರಾಮೀಣ ಹಾಗೂ ಸ್ಥಳೀಯ ಭಾಗದ ಆಸ್ಪತ್ರೆಗಳು ಬಲಗೊಳ್ಳುತ್ತಿದ್ದು, ಮಕ್ಕಳಿಗೆ ಅವರ ಮನೆಗೆ ಹತ್ತಿರದಲ್ಲೇ ಗುಣಮಟ್ಟದ ಉಚಿತ ಚಿಕಿತ್ಸೆ ಲಭ್ಯವಾಗುತ್ತಿದೆ.
ಈ ವರ್ಷದ ಜಾಗೃತಿ ಅಭಿಯಾನಕ್ಕೆ ಸಮಾಜದ ವಿವಿಧ ವಲಯಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ದಾನಿಗಳು, ರಾಯಭಾರಿಗಳು, ಸೀಳುತುಟಿ ಸಮಸ್ಯೆಯಿಂದ ಗುಣಮುಖರಾದ ವ್ಯಕ್ತಿಗಳು ಹಾಗೂ ಅವರ ಕುಟುಂಬಸ್ಥರು ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಈ ಕುರಿತು ಸ್ಮೈಲ್ ಟ್ರೈನ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು ಮತ್ತು ಪ್ರಾದೇಶಿಕ ನಿರ್ದೇಶಕರು (ಏಷ್ಯಾ) ಮಮತಾ ಕ್ಯಾರೊಲ್ ಅವರು, “ನಾವು ಚಿಕಿತ್ಸೆಯ ಲಭ್ಯತೆಯನ್ನು ವಿಸ್ತರಿಸುವಲ್ಲಿ ದೊಡ್ಡ ಪ್ರಗತಿಯನ್ನು ಸಾಧಿಸಿದ್ದೇವೆ, ಆದರೆ ಜಾಗೃತಿ ಮೂಡಿಸುವುದು ಇಂದಿಗೂ ನಮಗೆ ದೊಡ್ಡ ಸವಾಲಾಗಿದೆ. ಪ್ರತಿದಿನ, ಮಕ್ಕಳು ಸೂಕ್ತ ವಯಸ್ಸಿಗಿಂತ ಹಲವು ತಿಂಗಳುಗಳು ಅಥವಾ ವರ್ಷಗಳು ತಡವಾಗಿ ನಮ್ಮ ಬಳಿಗೆ ಬರುತ್ತಾರೆ. ಇದಕ್ಕೆ ಚಿಕಿತ್ಸೆ ಲಭ್ಯವಿಲ್ಲದಿರುವುದು ಕಾರಣವಲ್ಲ, ಬದಲಿಗೆ ಇದನ್ನು ಗುಣಪಡಿಸಬಹುದು ಎಂಬುದು ಪೋಷಕರಿಗೆ ತಿಳಿದಿರುವುದಿಲ್ಲ ಅಥವಾ ಸಮಾಜದ ಕಳಂಕಕ್ಕೆ ಅವರು ಹೆದರುತ್ತಾರೆ. ಈ ಜಾಗೃತಿಯ ಕೊರತೆಯನ್ನು ನೀಗಿಸಿದರೆ, ಯಾವುದೇ ಒಂದು ಮಗುವೂ ಕಾಯುವಂತಾಗದಂತೆ ಸಕಾಲದಲ್ಲಿ ಚಿಕಿತ್ಸೆ ನೀಡಬಹುದು” ಎಂದರು.
ಈ ಹಿನ್ನೆಲೆಯಲ್ಲಿ, ಸೀಳುತುಟಿಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೊಡೆದುಹಾಕಲು ಮತ್ತು ಆರಂಭಿಕ ಪತ್ತೆಹಚ್ಚುವಿಕೆಯನ್ನು ಉತ್ತೇಜಿಸಲು ಪೋಷಕರು, ಆರೋಗ್ಯ ವೃತ್ತಿಪರರು, ನೀತಿ ನಿರೂಪಕರು ಹಾಗೂ ಮಾಧ್ಯಮಗಳು ಸಕ್ರಿಯ ಪಾತ್ರ ವಹಿಸಬೇಕೆಂದು ಸ್ಮೈಲ್ ಟ್ರೈನ್ ಇಂಡಿಯಾ ಕರೆ ನೀಡಿದೆ.
ಸೀಳುತುಟಿಯ ಉಚಿತ ಚಿಕಿತ್ಸೆ ಅಥವಾ ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ನೆರವು ಬಯಸುವ ಕುಟುಂಬಗಳು ಸ್ಮೈಲ್ ಟ್ರೈನ್ ಇಂಡಿಯಾದ ಉಚಿತ ಸಹಾಯವಾಣಿ ಸಂಖ್ಯೆ: 1800 103 8301 ಗೆ ಸಂಪರ್ಕಿಸಬಹುದಾಗಿದೆ.

