ಮುಲ್ಕಿ: ತುಳುನಾಡಿನ ಕೃಷಿ, ಸಂಸ್ಕೃತಿ ಹಾಗೂ ಮಾತೃಮೂಲ ಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಪಗ್ಗು–18, ತುಳುವರು ಬೀಜ ಬಿತ್ತುವ ಪವಿತ್ರ ದಿನದಂದು “ಅಪ್ಪೆ ಬೇರ್ ದ ತುಳುನಾಡ್ – ರಾಷ್ಟ್ರೀಯ ತುಳು ವಿಚಾರಗೋಷ್ಠಿ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಮ್ಮೇಳನ ಅಧ್ಯಕ್ಷೆ ಡಾ. ಇಂದಿರಾ ಹೆಗ್ಗಡೆಯವರಿಗೆ ನೀಡಿ ಬಿಡುಗಡೆಗೊಳಿಸಲಾಯಿತು.
ಡಾ. ಇಂದಿರಾ ಹೆಗ್ಗಡೆ ಮಾತನಾಡಿ “ಪಗ್ಗು–18 ತುಳುವರು ಭೂಮಿಯಲ್ಲಿ ಬೀಜ ಬಿತ್ತುವ ದಿನ. ಇದೇ ದಿನ ‘ಅಪ್ಪೆ ಬೇರ್’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡುವುದು ತಾಯಿ ಬೇರು (ಅಪ್ಪೆ ಬೇರ್) ಸಂಸ್ಕೃತಿಯ ಬೀಜವನ್ನು ಮರು ಬಿತ್ತಿದಂತಾಗಿದೆ. ಈ ಸಾಂಸ್ಕೃತಿಕ ಬೀಜ ತುಳುನಾಡಿನಾದ್ಯಂತ ಪಸರಿಸಿ, ಮುಂದಿನ ಪೀಳಿಗೆಗಳಲ್ಲಿಯೂ ಜೀವಂತವಾಗಿ ಉಳಿಯಲಿ,” ಎಂದು ಶುಭ ಹಾರೈಸಿದರು.
ಅವರು ಮಾತನಾಡಿ, “ನಮ್ಮ ಹಿರಿಯರು ಸುಮಾರು ನೂರು ವರ್ಷಗಳ ಹಿಂದೆ ಬಿತ್ತಿದ ‘ತುಳುವ ಮಹಾಸಭೆ’ ಎಂಬ ಬೀಜವನ್ನು ಇಂದಿಗೂ ಜೀವಂತವಾಗಿಡಲು ಪ್ರಯತ್ನಿಸುತ್ತಿರುವ ತುಳುವರ್ಲ್ಡ್ ಫೌಂಡೇಶನ್ ಕಾರ್ಯ ಶ್ಲಾಘನೀಯವಾಗಿದ್ದು , ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಬೆಳವಣಿಗೆಗಾಗಿ ವಿಸ್ತಾರವಾಗಿ ಕಾರ್ಯನಿರ್ವಹಿಸಲಿ,” ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಡಾ. ರಾಜೇಶ್ ಆಳ್ವ, ಭಾನುಮತಿ ಶೆಟ್ಟಿ ಕಕ್ವಗುತ್ತು, ಸರೋಜಿನಿ ಸುವರ್ಣ, ವಸಂತ ರೈ, ಹರಿಪ್ರಸಾದ್ ರೈ ಮತ್ತಿತರು ಉಪಸ್ಥಿತರಿದ್ದರು.

