ಮುಲ್ಕಿ: ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಯುವಕನೋರ್ವ ಪಾದಯಾತ್ರೆ ಮೂಲಕ ವಿಶ್ವ ಪರ್ಯಟನೆ ಕೈಗೊಂಡಿದ್ದಾರೆ.
ಬೆಂಗಳೂರಿನ ವರ್ತೂರು ನಿವಾಸಿ ಸುಮಂತ್ ಅಶ್ವಿನ್ (22) ಎಂಬಾತ ಶ್ವಾನವನ್ನು ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿ ಪಾದಯಾತ್ರೆ ಮೂಲಕವೇ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾನೆ.
ಕಳೆದ2024ರ ಎಪ್ರಿಲ್ 14ರಂದು ಮಂತ್ರಾಲಯದಿಂದ ಆಂಧ್ರಪ್ರದೇಶ ಮುಖಾಂತರ ಕನ್ಯಾಕುಮಾರಿಗೆ ಪಾದಯಾತ್ರೆ ಕೈಗೊಂಡಿದ್ದರು ಬಳಿಕ ಕನ್ಯಾಕುಮಾರಿಯಿಂದ ಲಡಾಕ್ ಗೆ ಪಾದಯಾತ್ರೆ ಕೈಗೊಂಡಿದ್ದು ಈಗಾಗಲೇ ಸುಮಾರು 2000 ಕಿ.ಮೀ ಗೂ ಮಿಕ್ಕಿ ಕ್ರಮಿಸಿ ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಗಡಿ ಭಾಗದ ಬಪ್ಪನಾಡು ಬಳಿ ಬಂದಾಗ ಸ್ಥಳೀಯರಿಗೆ ಮಾಹಿತಿ ಸಿಕ್ಕಿ ಸಾಮಾಜಿಕ ಕಾರ್ಯಕರ್ತರಾದ ಪ್ರಾಣೇಶ್ ಹೆಜ್ಮಾಡಿ ಅವರ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.
ಈ ಸಂದರ್ಭ ಸುಮಂತ್ ರವರು ಮಾಧ್ಯಮದೊಂದಿಗೆ ಮಾತನಾಡಿ ಪಾದಯಾತ್ರೆ ಮಾಡುವಾಗ ಆಂಧ್ರಪ್ರದೇಶದಲ್ಲಿ ಬಿಳಿ ಬಣ್ಣದ ಗಂಡು ಬೀದಿ ನಾಯಿ ಸಿಕ್ಕಿದ್ದು ಸುಮಾರು 5 ಕಿ.ಮೀ ನಷ್ಟು ಸುಮಂತ್ ರವರನ್ನು ಹಿಂಬಾಲಿಸಿಕೊಂಡು ಬಂದಿತ್ತು, ಆ ನಾಯಿಗೆ ಸುಮಂತ್ ರವರು ಭೈರವ ಎಂದು ನಾಮಕರಣ ಮಾಡಿ ಅದಕ್ಕಾಗಿ ಒಂದು ಗಾಲಿ ಕುರ್ಚಿ ಖರೀದಿಸಿ ತಮ್ಮ ಜೊತೆ ದೇಶ ಸುತ್ತಲು ಹೊರಟಿದ್ದೇನೆ. ಕಳೆದ ಒಂದು ವರ್ಷದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆ ಮಾಡುವಾಗ ರಾತ್ರಿ ಹೊತ್ತು ಪೆಟ್ರೋಲ್ ಬಂಕ್, ದೇವಸ್ಥಾನ ಕಾಲೇಜು ಗ್ರೌಂಡ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿದರು.
ಅವರು ಮಾತನಾಡಿ ಬೆಂಗಳೂರಿನಲ್ಲಿ ತಾಯಿ ಮತ್ತು ತಮ್ಮ ನೊಂದಿಗೆ ವಾಸ್ತವ್ಯವಿದ್ದೇನೆ, ಇಂಜಿನಿಯರಿಂಗ್ ವ್ಯಾಸಂಗವನ್ನು ಮೂರನೇ ವರ್ಷದಲ್ಲಿ ಮೊಟಕುಗೊಳಿಸಿದ್ದು ಪ್ರಾಣಿಗಳ ರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸಲು ಕೈಗೊಂಡಿರುವ ದೇಶ ಪರ್ಯಟನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಜೀವನದಲ್ಲಿ ದುಡ್ಡು ಮಾಡುವ ಆಸೆ ಇಲ್ಲ ಮೂಕ ಪ್ರಾಣಿಗಳಿಗಾಗಿ ಏನಾದರೂ ಮಾಡಬೇಕೆಂಬ ಹಂಬಲ ಇದೆ ಎಂದು ಉಡುಪಿ ಜಿಲ್ಲೆಗೆ ಪಾದರ್ಪಣೆ ಮಾಡುತ್ತಾ ಮಾಧ್ಯಮದ ಜೊತೆ ತಮ್ಮ ಅನುಭವ ಹಂಚಿಕೊಂಡರು.