ಮುಲ್ಕಿ: ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು

0
147

ಮುಲ್ಕಿ: ಪೊಲೀಸ್‌ ಠಾಣಾ ವ್ಯಾಪ್ತಿಯ ಪಡುಪಣಂಬೂರು ಸಮೀಪದ ಕಲ್ಲಾಪು ರೈಲ್ವೇ ಗೇಟ್ ಬಳಿ ವ್ಯಕ್ತಿಯೊಬ್ಬರು ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಹಳೆಯಂಗಡಿ ಕೊಪ್ಪಳ ನಿವಾಸಿ ರಾಮ ಗುರಿಕಾರ (85) ಎಂದು ಗುರುತಿಸಲಾಗಿದೆ. ಮೃತ ರಾಮ ಗುರಿಕಾರರವರು ಹಳೆಯಂಗಡಿ ಕೊಪ್ಪಳದಲ್ಲಿರುವ ತಮ್ಮ ಮನೆಯಿಂದ ಕಲ್ಲಾಪು ವಿನಲ್ಲಿರುವ ತಮ್ಮ ಮಗನ ಮನೆಗೆ ರೈಲು ಹಳಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಗುರುವಾರ ಸಂಜೆ 5:30 ಸುಮಾರಿಗೆ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ರಾಮಗುರಿಕಾರರವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಅಪಘಾತ ನಡೆದ ಕೂಡಲೇ ರೈಲಿನ ಚಾಲಕ ಕಲ್ಲಾಪು ರೈಲ್ವೇ ಗೇಟ್ ಕೀಪರ್ ಗೆ ಮಾಹಿತಿ ನೀಡಿದ್ದು, ಬಳಿಕ ಮುಲ್ಕಿ ಪೊಲೀಸರಿಗೆ ದೂರು ನೀಡಲಾಗಿದೆ. ಮೃತ ರಾಮ ಗುರಿಕಾರ ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಒಂದನೇ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದೆ ಹಳೆಯಂಗಡಿಯಲ್ಲಿ ನೇಕಾರ ವೃತ್ತಿ ನಡೆಸುತ್ತಿದ್ದರು. ಮೃತರು 4 ಪುತ್ರರು ಹಾಗೂ 3 ಪುತ್ರಿಯರನ್ನು ಅಗಲಿದ್ದಾರೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here