ಮುಂಡ್ಕೂರು ಶಿಕ್ಷಣ ಹಾಗೂ ಸಮಾಜೋದ್ಧಾರಕ ಸಂಘದ ಅಧೀನದಲ್ಲಿರುವ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಮುಂಡ್ಕೂರಿನ 60ನೇ ವರ್ಷದ ಸಂಭ್ರಮ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 120ನೇ ವರ್ಷದ ಸಂಭ್ರಮಾಚರಣೆಯು ಡಿಸೆಂಬರ್ 4 ಮತ್ತು 5ರಂದು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಎರಡು ದಿನಗಳ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಯಕ್ಷಗಾನ ಹಾಗೂ ತುಳು ಹಾಸ್ಯಮಯ ನಾಟಕಗಳನ್ನು ಆಯೋಜಿಸಲಾಗಿದೆ.
ಡಿಸೆಂಬರ್ 4ರಂದು ಬೆಳಿಗ್ಗೆ 8-00ರಿಂದ ಉಪಹಾರ,9-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಶತಮಾನೋತ್ತರ ದ್ವಿಂಶತಿ ಹಾಗೂ ಷಷ್ಟ್ಯಬ್ದಿ ಸಂಭ್ರಮದ ಅಮೃತ ಘಳಿಗೆಗೆ ಚಾಲನೆ – ಪೂರ್ವ ವಿದ್ಯಾರ್ಥಿಗಳಾದ ಪ್ರಕಾಶ್ ಪೂಜಾರಿ ಮತ್ತು ಸುಧಾಕರ ಸಾಲ್ಯಾನ್ ಅವರಿಗೆ ವಿಶೇಷ ಬಿರುದು ಪ್ರದಾನ
ಸಂಸ್ಥೆಯ ಪೂರ್ವ ವಿದ್ಯಾರ್ಥಿ ಹಾಗೂ ಪುತ್ತೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ (DFO) ಪ್ರಕಾಶ್ ಪೂಜಾರಿ ಅವರಿಗೆ ‘ವಿದ್ಯಾಮೃತ ಪರಿಸರ ರತ್ನ’ ಬಿರುದು ನೀಡಿ ಗೌರವಿಸಲಾಗುವುದು. ಹಾಗೆಯೇ ಸಂಕಲಕರಿಯದ ಸುಧಾಕರ ಸಾಲ್ಯಾನ್ ಅವರಿಗೆ ‘ವಿದ್ಯಾಮೃತ ಜಲಯೋಗಿ’ ಬಿರುದು ಪ್ರದಾನ ಮಾಡಿ ಸನ್ಮಾನಿಸಲಾಗುವುದು.
ಮಧ್ಯಾಹ್ನ 11.30ರಿಂದ 12 ಗಂಟೆಯವರೆಗೆ ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 12.15ಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಜರುಗಲಿವೆ. ಮಧ್ಯಾಹ್ನ 1.15ಕ್ಕೆ ಸಹಭೋಜನದ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ 2.15ಕ್ಕೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ‘ಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಂಜೆ 5.15ಕ್ಕೆ ಉಪಾಹಾರದ ವ್ಯವಸ್ಥೆಯಿದ್ದು, ಸಂಜೆ 6.30ಕ್ಕೆ ಬೈಲೂರಿನ ಚೈತನ್ಯ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ‘ಊರು ಬೋಡು ಪುದರ್ ಬೊಡ್ಡಿ’ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಸಂಭ್ರಮಾಚರಣೆಯ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿರಲಿದೆ.
ಮೊದಲ ದಿನ ಬೆಳಗ್ಗಿನಿಂದಲೇ ಎಲ್ಕೆಜಿ, ಯುಕೆಜಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ‘ಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಸಂಜೆ 6.30ಕ್ಕೆ ಬೈಲೂರಿನ ಚೈತನ್ಯ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ‘ಊರು ಬೋಡು ಪುದರ್ ಬೊಡ್ಡಿ’ ಪ್ರದರ್ಶನಗೊಳ್ಳಲಿದೆ.
ಎರಡನೇ ದಿನವಾದ ಡಿಸೆಂಬರ್ 5ರಂದು ಬೆಳಿಗ್ಗೆ 8 ಗಂಟೆಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 9 ಗಂಟೆಗೆ ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 10 ಗಂಟೆಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಮುಂಡ್ಕೂ ರಿನ ಸಾಧಕ ವಿದ್ಯಾರ್ಥಿಗಳಾದ ಅಮೂಲ್ಯ ರಾವ್, ಸಿಂಚನ ಸಪಳಿಗ ಮತ್ತು ಜಯರಾಜ್ ಅವರನ್ನು ಗೌರವಿಸಲಾಗುವುದು.
ಬೆಳಿಗ್ಗೆ 11 ಗಂಟೆಗೆ ಪೂರ್ವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮುಂಡ್ಕೂರಿನ ಬಹುಮುಖ ಪ್ರತಿಭಾವಂತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿ.ಎ. ಚಂದ್ರಶೇಖರ್ ಶೆಟ್ಟಿ ಹಾಗೂ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸಂವಾದ ಕಾರ್ಯಕ್ರಮದ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಸಹಭೋಜನದ ಬಳಿಕ 2 ಗಂಟೆಯಿಂದ 3.45ರವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 4ರಿಂದ 6 ಗಂಟೆಯವರೆಗೆ ಯಕ್ಷಗಾನದ ‘ಭಾರ್ಗವ ವಿಜಯ’ ಪ್ರದರ್ಶನಗೊಳ್ಳಲಿದೆ.
ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ CAPS ಫೌಂಡೇಶನ್ ಸಹಯೋಗದಲ್ಲಿ ‘Vidyavardhaka Vidyamritha Sambhrama – 60+ Schools Empowerment’ ಎಂಬ ಸಮಾಜಮುಖಿ ಸಮರ್ಪಣಾ ಸಮಾರೋಪ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ 60ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕ್ರೀಡಾ ಪರಿಕರಗಳನ್ನು ವಿತರಿಸುವ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.
ಸಂಜೆ 6 ಗಂಟೆಗೆ ಉಪಾಹಾರದ ವ್ಯವಸ್ಥೆಯಿದ್ದು, ರಾತ್ರಿ 7 ಗಂಟೆಗೆ ಕಾಪು ರಂಗತರಂಗ ತಂಡದ ಕಲಾವಿದರಿಂದ ತುಳು ಹಾಸ್ಯಮಯ ಸಾಮಾಜಿಕ ನಾಟಕ ‘ವಿಕ್ರಂ-ವೇದ’ ಪ್ರದರ್ಶನಗೊಳ್ಳಲಿದೆ. ಎರಡನೇ ದಿನದ ಸಂಭ್ರಮಕ್ಕೆ ಈ ನಾಟಕ ವಿಶೇಷ ಮೆರುಗು ನೀಡಲಿದೆ.

