ಮೂಡಬಿದ್ರೆ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಬಾರ್ಡ ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಹಣಕಾಸು ಹಾಗೂ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ಸಾರ್ವಜನಿಕರಿಗೆ ಹಣಕಾಸು ಜಾಗೃತಿ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಅರಿವು ಮೂಡಿಸುವುದಾಗಿತ್ತು.
ಕಾರ್ಯಕ್ರಮವನ್ನು ಕುಸುಮಧರ್ ವಿ., ಕಾರ್ಯನಿರ್ವಾಹಕ ಅಧಿಕಾರಿ, ಮೂಡಬಿದ್ರೆ ತಾಲ್ಲೂಕು ಪಂಚಾಯತ್ ಅವರು ಉದ್ಘಾಟಿಸಿ ಶುಭಹಾರೈಸಿದರು ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೌಡ, ಡಿಪಿಎಂ – ಎನ್‌ಆರ್‌ಎಲ್‌ಎಂ; ನಿಖಿಲ್ ಕೆ.ಸಿ, ಟಿಪಿಎಂ; ಪ್ರಜ್ವಥಾ, ಕ್ಲಸ್ಟರ್ ಸೂಪರ್ವೈಸರ್; ಭಾನುಮತಿ ಶೆಟ್ಟಿ, ಅಧ್ಯಕ್ಷರು, ಶಾಂಭವಿ ಸಂಜೀವಿನಿ ತಾಲ್ಲೂಕು ಮಟ್ಟದ ಒಕ್ಕೂಟ ಮುಲ್ಕಿ; ಹಾಗೂ ವನಿತಾ, ಕಾರ್ಯದರ್ಶಿ, ಧರಣಿ ಸಂಜೀವಿನಿ ತಾಲ್ಲೂಕು ಮಟ್ಟದ ಒಕ್ಕೂಟ, ಮೂಡಬಿದ್ರೆ ಅವರು ಉಪಸ್ಥಿತರಿದ್ದರು.

ಕೆನರಾ ಬ್ಯಾಂಕ್, ಮೂಡಬಿದ್ರೆ ಶಾಖೆಯ ವ್ಯವಸ್ಥಾಪಕಿ ಅಕ್ಷತಾ ಹಾಗೂ ಪುತ್ತಿಗೆ ಶಾಖೆಯ ವ್ಯವಸ್ಥಾಪಕ ಮನು ಶಿವನ್ ಅವರು ಬ್ಯಾಂಕಿನ ವಿವಿಧ ಉತ್ಪನ್ನಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸೆಲ್ಕೋ ಸೊಲಾರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರವೀನಾ ಬಂಗೇರಾ ಅವರು ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಕುರಿತು ವಿವರವಾದ ಮಾಹಿತಿ ನೀಡಿ, ಸೌರಶಕ್ತಿ ಬಳಕೆ ಹಾಗೂ ಸಬ್ಸಿಡಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಜನ ಸುರಕ್ಷಾ ಯೋಜನೆಗಳು, ಪ್ರಧಾನಮಂತ್ರಿ ಮುದ್ರಾ ಯೋಜನೆ, PMEGP, PMFME, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ (KCC), ಶಿಕ್ಷಣ ಸಾಲ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ (SSY), ಎನ್‌ಪಿಎಸ್ ವಾತ್ಸಲ್ಯ ಯೋಜನೆ, ಕ್ರೆಡಿಟ್ ಸ್ಕೋರ್, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಹಾಗೂ ಡಿಜಿಟಲ್ ವಂಚನೆ ತಡೆಗೆ ಸಂಬಂಧಿಸಿದ ಜಾಗೃತಿ, ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ – 1930 ಕುರಿತು ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ ಮಂಗಳೂರು ಇಲ್ಲಿನ ಸಮಾಲೋಚಕ ಶ್ರೀ ಲತೇಶ್ ಬಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮವು ಅತ್ಯಂತ ಮಾಹಿತಿ ಪ್ರಧಾನವಾಗಿದ್ದು, ಭಾಗವಹಿಸಿದವರು ಹಣಕಾಸು ಸೇರ್ಪಡೆ, ಸರ್ಕಾರದ ಯೋಜನೆಗಳ ಸದುಪಯೋಗ ಹಾಗೂ ಸುರಕ್ಷಿತ ಡಿಜಿಟಲ್ ವ್ಯವಹಾರಗಳ ಕುರಿತು ಹೆಚ್ಚಿನ ಅರಿವು ಪಡೆದರು.

