ಮಂಗಳೂರಿನಲ್ಲಿ ಅ.4ರಂದು ‘ನಾದ ನಂದನಂ’ ಭಜನಾ ಸಂಕೀರ್ತನೋತ್ಸವ

0
38

19 ಕಲಾವಿದರ ತಂಡದಿಂದ ಭಕ್ತಿ, ಭಾವ, ಜನಪದ ಹಾಗೂ ಚಿತ್ರಗೀತೆಗಳ ಸಂಗಮ

ಮಂಗಳೂರು: ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯನ್ನು ಸಂಗೀತ ಮತ್ತು ಗಾಯನದ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ನೋಂದಾಯಿತ ‘ನಾದ ನಂದನಂ’ (ರಿ.) ಸಂಸ್ಥೆಯ ಪ್ರಥಮ ಭಜನಾ-ಸಂಕೀರ್ತನೋತ್ಸವ ಹಾಗೂ ಉದ್ಘಾಟನಾ ಸಮಾರಂಭವು 2026ರ ಅಕ್ಟೋಬರ್ 4ರಂದು ಸಂಜೆ 5 ಗಂಟೆಗೆ ಮಂಗಳೂರು ಉರ್ವಾ ಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ಶಂಕರ ಶ್ಯಾನುಭೋಗ್ ಹಾಗೂ ರಮೇಶ್‌ಚಂದ್ರ, ಬೆಂಗಳೂರು ಅವರ ನೇತೃತ್ವದಲ್ಲಿ 19 ಕಲಾವಿದರ ತಂಡ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ. ಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ, ಚಲನಚಿತ್ರ ಗೀತೆಗಳ ಜೊತೆಗೆ ಪುರಂದರದಾಸ, ಕನಕದಾಸ, ಬಸವಣ್ಣ ಹಾಗೂ ಶರಣರ ತತ್ವಪದಗಳ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.

ಕಾರ್ಯಕ್ರಮದ ಅಂಗವಾಗಿ ಖ್ಯಾತ ಗಾಯಕ ಶಂಕರ ಶ್ಯಾನುಭೋಗ್ ಅವರು ನಂದಾದೀಪ ಬೆಳಗಿಸುವ ಮೂಲಕ ‘ನಾದ ನಂದನಂ’ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ನೇತೃತ್ವದಲ್ಲಿ ದೇಶ-ವಿದೇಶಗಳಲ್ಲಿಯೂ ಭಜನಾ-ಸಂಕೀರ್ತನೋತ್ಸವ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ.

ವಿವಿಧ ಸಂಗೀತ ಪ್ರಕಾರಗಳ ಸಂಗಮ

ಕರ್ನಾಟಕ ಹಾಗೂ ದಕ್ಷಿಣ ಕರಾವಳಿಯಲ್ಲಿ ಸಂಗೀತದ ಹೊಸ ಆಯಾಮವನ್ನು ಪರಿಚಯಿಸುವ ಉದ್ದೇಶದಿಂದ ‘ನಾದ ನಂದನಂ’ ತಂಡವನ್ನು ರೂಪಿಸಲಾಗಿದೆ. ಭಕ್ತಿ-ಭಾವದ ಭಜನಾ ಸಂಕೀರ್ತನೆಗಳೊಂದಿಗೆ ಚಿತ್ರಗೀತೆ, ಭಾವಗೀತೆ ಹಾಗೂ ವಿವಿಧ ಭಾಷೆಗಳ ಹಾಡುಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುವ ಮೂಲಕ ಸಂಗೀತ ರಸಿಕರಿಗೆ ವಿಶೇಷ ಅನುಭವ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.

ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್‌ಚಂದ್ರ ಅವರ ಮುಂದಾಳುತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪಕ್ವ ಗಾಯಕರ ಹಾಗೂ ನುರಿತ ಸಂಗೀತಗಾರರ ತಂಡ ಭಾಗವಹಿಸಲಿದೆ. ಎಲ್‌ಇಡಿ ಪರದೆ, ವಿಶೇಷ ಧ್ವನಿ ಹಾಗೂ ಬೆಳಕಿನ ರಂಗ ವಿನ್ಯಾಸದೊಂದಿಗೆ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.

ಗಣ್ಯರ ಉಪಸ್ಥಿತಿ

‘ನಾದ ನಂದನಂ’ ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆಯ ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಉಡುಪಿಯ ಶ್ಯಾಮಿಲಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಜಿ. ಶಂಕರ್, ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ರಾಘವೇಂದ್ರ ಭಟ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಬಿ. ಸರ್ವೊತ್ತಮ ಶೆಟ್ಟಿ ಸೇರಿದಂತೆ ಬ್ಯಾಂಕಿಂಗ್, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ.

ಉಚಿತ ಪಾಸ್ ಲಭ್ಯ

ಕಾರ್ಯಕ್ರಮಕ್ಕೆ ಪ್ರವೇಶ ಪಾಸ್‌ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಪಾಸ್ ಪಡೆಯಲು ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕು. ನವಭಾರತ್ ಸರ್ಕಲ್‌ನ ಓಷನ್ ಪರ್ಲ್, ತಾಜ್‌ಮಹಲ್ ಮಂಗಳೂರು, ನವಭಾರತ ಸರ್ಕಲ್, ಪತ್ತುಮುಡಿ ಲಾಲ್‌ಬಾಗ್, ಅಯೋಧ್ಯಾ ಕೊಡಿಯಾಲ್‌ಬೈಲ್ ಹಾಗೂ ಪದ್ಮಶ್ರೀ ಪಂಪ್ ಪಂಪ್‌ವೆಲ್ ಕೌಂಟರ್‌ಗಳಲ್ಲಿ ಉಚಿತ ಪಾಸ್‌ಗಳು ಲಭ್ಯವಿರಲಿವೆ.

ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ‘ನಾದ ನಂದನಂ’ ಸಂಸ್ಥೆಯ ಪ್ರಥಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.