ಕಾಸರಗೋಡಿನಲ್ಲಿ ಕನ್ನಡ, ತುಳು ಸೇರಿದಂತೆ ವಿವಿಧ ಭಾಷಾ ಸಂಘಟನೆಗಳ ವಿಳಾಸ ಡೈರೆಕ್ಟರಿ ಪ್ರಕಟಣೆಗೆ ಸಿದ್ಧತೆ

0
22

ನವೆಂಬರ್ 28–29ರಂದು 8ನೇ ಕನ್ನಡ ಸಮ್ಮೇಳನ; ಅ.31ರೊಳಗೆ ವಿವರ ಸಲ್ಲಿಸಲು ಮನವಿ

ಕಾಸರಗೋಡು : ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಾಸರಗೋಡು ಕನ್ನಡ ಗ್ರಾಮದಲ್ಲಿ 2026ರ ನವೆಂಬರ್ 28 ಮತ್ತು 29ರಂದು ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ, ಕೇರಳ–ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಕೇರಳ ರಾಜ್ಯದ, ವಿಶೇಷವಾಗಿ ಕಾಸರಗೋಡು ಜಿಲ್ಲೆಯ ಕನ್ನಡ, ತುಳು ಹಾಗೂ ವಿವಿಧ ಭಾಷಾ ಸಮುದಾಯ ಸಂಘಟನೆಗಳ ವಿಳಾಸದ ಡೈರೆಕ್ಟರಿಯ 2ನೇ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಲು ಪ್ರತಿಷ್ಠಾನ ನಿರ್ಧರಿಸಿದೆ.

ಡೈರೆಕ್ಟರಿಯಲ್ಲಿ ಕೇರಳದ ವಿವಿಧ ಜಿಲ್ಲೆಗಳು ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸುಮಾರು 500 ಕನ್ನಡ, ತುಳು ಹಾಗೂ ವಿವಿಧ ಭಾಷಾ ಸಮುದಾಯಗಳ ಸಂಘ-ಸಂಸ್ಥೆಗಳು, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಕನ್ನಡ-ತುಳು ಸಂಘಟನೆಗಳು ಹಾಗೂ ಸಾರ್ವಜನಿಕ ಸ್ವಯಂಸೇವಾ ಸಂಸ್ಥೆಗಳ ವಿವರಗಳನ್ನು ಸೇರ್ಪಡೆಗೊಳಿಸಲಾಗುತ್ತದೆ.

ಇದರ ಜೊತೆಗೆ ಸುಮಾರು 500 ಭಜನಾ ಸಂಘಗಳು, ಭಜನಾ ಮಂಡಳಿಗಳು, ಭಜನಾ ಮಂದಿರಗಳು ಹಾಗೂ ಸುಮಾರು 200 ಕೇರಳ ಸರಕಾರದ ಕನ್ನಡ ಶಾಲಾ-ಕಾಲೇಜುಗಳು ಮತ್ತು ಖಾಸಗಿ ಕನ್ನಡ ಶಾಲಾ-ಕಾಲೇಜುಗಳ ವಿವರಗಳನ್ನು ಒಳಗೊಂಡ ಡೈರೆಕ್ಟರಿ ಪ್ರಕಟಿಸಲು ಉದ್ದೇಶಿಸಲಾಗಿದೆ.

ಸಂಬಂಧಪಟ್ಟ ಸಂಘ-ಸಂಸ್ಥೆಗಳು ತಮ್ಮ ಸಂಸ್ಥೆಯ ಹೆಸರು, ಪೂರ್ಣ ವಿಳಾಸ, ಮೊಬೈಲ್/ವಾಟ್ಸ್‌ಆಪ್ ಸಂಖ್ಯೆ, ಇ-ಮೇಲ್, ಸ್ಥಾಪನೆಯಾದ ವರ್ಷ, ಸಂಕ್ಷಿಪ್ತ ಪರಿಚಯ ಹಾಗೂ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಇತರ ಪದಾಧಿಕಾರಿಗಳ ಹೆಸರು ಮತ್ತು ಮನೆ ವಿಳಾಸದ ವಿವರಗಳನ್ನು ಲೆಟರ್‌ಹೆಡ್ ಅಥವಾ ಬಿಳಿ ಕಾಗದದಲ್ಲಿ ಪ್ರತ್ಯೇಕವಾಗಿ ಬರೆದು 2026ರ ಅಕ್ಟೋಬರ್ 31ರೊಳಗೆ ಕಳುಹಿಸುವಂತೆ ಪ್ರತಿಷ್ಠಾನ ಮನವಿ ಮಾಡಿದೆ.

ವಿವರಗಳನ್ನು ಅಂಚೆ ಮೂಲಕ ಕಳುಹಿಸಬಹುದಾಗಿದ್ದು, ವಾಟ್ಸ್‌ಆಪ್ ಮೂಲಕವೂ ಸಲ್ಲಿಸಬಹುದು.

ಸಂಪರ್ಕ ವಿಳಾಸ:
ಶಿವರಾಮ ಕಾಸರಗೋಡು, ಅಧ್ಯಕ್ಷರು,
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ,
ಮೀಪುಗುರಿ–ಪಾರೆಕಟ್ಟೆ ರಸ್ತೆ, ಕಾಸರಗೋಡು–671121.

ಮೊಬೈಲ್: 9448572016, 9901951965
ಇ-ಮೇಲ್: Shivaramakasaragod@gmail.com