- ಬೆಂಗಳೂರು: ಆಹಾರ, ವಿಜ್ಞಾನ, ಕಲೆ ಹಾಗೂ ಸಂಸ್ಕೃತಿಯ ನಡುವಿನ ಸಂಬಂಧವನ್ನು ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನ ಸೈನ್ಸ್ ಗ್ಯಾಲರಿ ಬೆಂಗಳೂರು ವತಿಯಿಂದ ನಾಲ್ಕನೇ ಆವೃತ್ತಿಯ ‘ನಮ್ಮ ಊಟ’ ಆಹಾರ ಉತ್ಸವವನ್ನು ನವೆಂಬರ್ 21 ಮತ್ತು 22ರಂದು ಆಯೋಜಿಸಲಾಗಿದೆ.ಬೆಂಗಳೂರಿನ ಬೆಳ್ಳಾರಿ ರಸ್ತೆಯಲ್ಲಿರುವ ಸೈನ್ಸ್ ಗ್ಯಾಲರಿ ಆವರಣದಲ್ಲಿ ನಡೆಯಲಿರುವ ಈ ಎರಡು ದಿನಗಳ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಎರಡೂ ದಿನ ಬೆಳಗ್ಗೆ 11 ಗಂಟೆಯಿಂದ ಕಾರ್ಯಕ್ರಮಗಳು ಆರಂಭವಾಗಲಿವೆ.
- ಆಹಾರದ ರುಚಿ, ಪರಿಮಳ, ವಿನ್ಯಾಸ ಮತ್ತು ಅದರ ಹಿಂದಿರುವ ವೈಜ್ಞಾನಿಕ ವಿಚಾರಗಳನ್ನು ಜನರಿಗೆ ಪರಿಚಯಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಆಹಾರ ಮಳಿಗೆಗಳು, ಕಾರ್ಯಾಗಾರಗಳು, ಕಲಾ ಪ್ರದರ್ಶನಗಳು, ಸಂವಾದಗಳು, ಪ್ರಾತ್ಯಕ್ಷಿಕೆಗಳು ಹಾಗೂ ಮುಕ್ತ ವೇದಿಕೆಯ ಕಾರ್ಯಕ್ರಮಗಳು ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.
- ಆಹಾರದ ಬಗ್ಗೆ ಮಾತನಾಡಿದಾಗ ಅದರ ರುಚಿಯಷ್ಟೇ ಅಲ್ಲದೆ, ಚಿಪ್ಸ್ ಏಕೆ ಗರಿಗರಿಯಾಗಿರುತ್ತದೆ, ಕೆಲವು ಪರಿಮಳಗಳು ಬಾಲ್ಯದ ನೆನಪುಗಳನ್ನು ಏಕೆ ಮರುಕಳಿಸುತ್ತವೆ ಎಂಬ ಕುತೂಹಲಕಾರಿ ಪ್ರಶ್ನೆಗಳೂ ಮೂಡುತ್ತವೆ. ಇಂತಹ ಪ್ರಶ್ನೆಗಳ ಮೂಲಕ ಆಹಾರದ ಹಿಂದಿರುವ ವಿಜ್ಞಾನವನ್ನು ಅನ್ವೇಷಿಸಲು ‘ನಮ್ಮ ಊಟ’ ವೇದಿಕೆಯಾಗಲಿದೆ ಎಂದು ಸೈನ್ಸ್ ಗ್ಯಾಲರಿ ಬೆಂಗಳೂರಿನ ಸ್ಥಾಪಕ ನಿರ್ದೇಶಕಿ ಜಾಹ್ನವಿ ಫಲ್ಕೆ ತಿಳಿಸಿದ್ದಾರೆ.ಆಹಾರ ಉದ್ಯಮಿಗಳು, ಬಾಣಸಿಗರು, ಆಹಾರ ಸಂಘಟನೆಗಳು, ಸಂಸ್ಥೆಗಳು ಹಾಗೂ ಮನೆಯಲ್ಲೇ ಆಹಾರ ತಯಾರಿಸುವವರನ್ನು ಮುಕ್ತ ಆಹ್ವಾನದ ಮೂಲಕ ಆಯ್ಕೆ ಮಾಡಲಾಗಿದೆ. ಇವರ ಆಹಾರ ಮಳಿಗೆಗಳು ಮತ್ತು ಕಾರ್ಯಾಗಾರಗಳು ಆಹಾರದ ತಯಾರಿಕೆ, ವಿಜ್ಞಾನ, ಪರಿಸರ ಮತ್ತು ಸುಸ್ಥಿರ ಆಹಾರ ಪದ್ಧತಿಗಳ ಕುರಿತು ಹೊಸ ವಿಚಾರಗಳನ್ನು ತಿಳಿಸಲಿವೆ.ಈ ಬಾರಿಯ ಉತ್ಸವದಲ್ಲಿ ‘ಸಿಪ್ ಆ್ಯಂಡ್ ಪೇಂಟ್’, ‘ಫುಡ್ ಕರೋಕೆ’ ಸೇರಿದಂತೆ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ‘ಒಂದು ಪ್ಲೇಟ್ @SGB’ ವತಿಯಿಂದ ಫುಡ್ ಕರೋಕೆ ಕಾರ್ಯಕ್ರಮವೂ ನಡೆಯಲಿದೆ. ಆಹಾರ ಪ್ರಿಯರು ತಮ್ಮ ಆಸಕ್ತಿಯನ್ನು ಹಂಚಿಕೊಳ್ಳಲು ಮತ್ತು ಹೊಸ ಅನುಭವಗಳನ್ನು ಪಡೆಯಲು ಈ ಉತ್ಸವ ಅವಕಾಶ ಕಲ್ಪಿಸಲಿದೆ.ನಾವು ಸೇವಿಸುವ ಆಹಾರವು ಆರೋಗ್ಯ, ಪರಿಸರ, ಕೃಷಿ, ಸಂಸ್ಕೃತಿ ಹಾಗೂ ಆಧುನಿಕ ಆವಿಷ್ಕಾರಗಳೊಂದಿಗೆ ಹೇಗೆ ಸಂಬಂಧ ಹೊಂದಿದೆ ಎಂಬುದನ್ನು ವಿವಿಧ ಚಟುವಟಿಕೆಗಳ ಮೂಲಕ ಪರಿಚಯಿಸಲಾಗುತ್ತದೆ.
- ಕಾರ್ಯಕ್ರಮದ ವಿವರ:
- ಸ್ಥಳ: ಸೈನ್ಸ್ ಗ್ಯಾಲರಿ ಬೆಂಗಳೂರು, ಬೆಳ್ಳಾರಿ ರಸ್ತೆ, ಬೆಂಗಳೂರು
- ದಿನಾಂಕ: ನವೆಂಬರ್ 21 ಮತ್ತು 22, 2026
- ಸಮಯ: ಬೆಳಗ್ಗೆ 11 ಗಂಟೆಯಿಂದ
- ಪ್ರವೇಶ: ಉಚಿತ
ಕಾರ್ಯಕ್ರಮಗಳ ಸಂಪೂರ್ಣ ವಿವರಗಳಿಗೆ: https://quantum.scigalleryblr.org/programmes
ಸೈನ್ಸ್ ಗ್ಯಾಲರಿ ಸಮಯ: ಬುಧವಾರ ಮತ್ತು ಗುರುವಾರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹಾಗೂ ಶುಕ್ರವಾರದಿಂದ ಭಾನುವಾರದವರೆಗೆ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ.

