ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ನೀಡುವಂತೆ ಕೋರಿ ಕರ್ನಾಟಕದ ಮುಖ್ಯಮಂತ್ರಿಗಳ ಸಾಲಿನಲ್ಲಿ ಶೋಷಿತ ಸಮುದಾಯದವರ ಶ್ರೇಯೋಭಿವೃದ್ಧಿಗಾಗಿ ‘ಅಭಿನವ ದೇವರಾಜ ಅರಸ್’ ಎನ್ನುವ ಗೌರವಕ್ಕೆ ಪಾತ್ರರಾದವರು , ನೆನೆಗುದಿಗೆ ಬಿದ್ದಿದ್ದ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ ಹಿಂದುಳಿದ ಸಮಾಜದ 26 ಪಂಗಡಗಳಲ್ಲಿ ಹರ್ಷವನ್ನು ಮೂಡಿಸಿರುತ್ತೀರಿ.
ಪ್ರಸ್ತುತ ಈ 26 ಪಂಗಡಗಳ ಅಭಿವೃದ್ಧಿಗೆ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದು ಅದು ಇಂತಿದೆ.
1. ಶಿಕ್ಷಣ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣವನ್ನು ದೊರಕಿಸುವಲ್ಲಿ ಅಭಿವೃದ್ಧಿ ನಿಗಮ ಶ್ರಮಿಸಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ವೃತ್ತಿ ಮಾರ್ಗದರ್ಶನ ತರಬೇತಿ, ಐಎಎಸ್, ಐಪಿಎಸ್ ಉನ್ನತ ಶಿಕ್ಷಣಕ್ಕೆ ತರಬೇತಿ ಇತ್ಯಾದಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
2. ಉದ್ಯೋಗ: ಸ್ವ ಉದ್ಯೋಗ ನಡೆಸಲು ತರಬೇತಿ ಮತ್ತು ಸಾಲ ಸೌಲಭ್ಯ, ಸಮುದಾಯಗಳ ಕುಲಕಸುಬಾಗಿರುವ ನೀರಾ ಉತ್ಪಾದನೆ, ಶೇಂದಿ ಇಳಿಸುವ ಬಗ್ಗೆ ತರಬೇತಿಯನ್ನು ನೀಡಿ ಆಧುನಿಕ ಸ್ಪರ್ಶವನ್ನು ನೀಡುವುದು. ನಾಟಿವೈದ್ಯ ಮತ್ತು ಆಯುರ್ವೇದಕ್ಕೆ ಪ್ರೋತ್ಸಾಹವನ್ನು ನೀಡುವುದು.
3. ಉದ್ಯಮ: ಕಲ್ಲರಸ ತಯಾರಿ ಉದ್ಯಮ ಹಾಗೂ ಪ್ರವಾಸೋದ್ಯಮ, ಸೇವಾಧರಿತ ಉದ್ಯಮ ಮತ್ತು ಇನ್ನಿತರ ಉದ್ಯಮ ಸ್ಥಾಪನೆಗೆ ಸಬ್ಸಿಡಿಯೊಂದಿಗೆ ಸರ್ವ ಸಹಕಾರ ನೀಡುವುದು. ಹೆಚ್ಚು ಉದ್ಯೋಗ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದು. ಕುಲಕಸುಬಾದ ಶೇಂದಿ, ಕಲ್ಲರಸ ತಯಾರಿ ಉದ್ಯಮದ ಮೌಲ್ಯವರ್ಧನೆಗಾಗಿ (R&D) Research And Development Centre ಸ್ಥಾಪಿಸುವುದು.
4. ಧಾರ್ಮಿಕ: ಸಮುದಾಯದ ಹಿರಿಯರು ಆರಾಧಿಸಿಕೊಂಡು ಬರುತ್ತಿರುವ ಗರಡಿಗಳ ಅರ್ಚಿಕರಿಗೆ ಮತ್ತು ಸಮುದಾಯಕ್ಕೆ ಸಂಬಂಧಿಸಿದ ಧಾರ್ಮಿಕ ಕೇಂದ್ರದ ಆರ್ಚಕರು ಮತ್ತು ಸಹಾಯಕರಿಗೆ ಮಾಸಾಶನ ನೀಡುವುದು.
5. ಮಹಿಳಾ ಸಬಲೀಕರಣ: ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಮತ್ತು ಸ್ವ ಉದ್ಯೋಗ ಕೈಗೊಳ್ಳಲು ಪೂರಕವಾಗಿರುವ ತರಬೇತಿಯನ್ನು ನೀಡುವುದು. ಮಹಿಳಾ ಗುಂಪುಗಳನ್ನು ರಚಿಸಿ ಕನಿಷ್ಠ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು.
6. ಉತ್ತರ ಕರ್ನಾಟಕ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
7. ಕ್ರೀಡೆ, ಸಿನೆಮಾ ಇನ್ನಿತರ ಕಲೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಧನೆ ಮಾಡಿದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವುದು.
8. ಸಮಾಜದ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ನಗದು ಪುರಸ್ಕಾರದೊಂದಿಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡುವುದು. ಎಲ್ಲಾ ಕಾರ್ಯಗಳಿಗೆ ಸುಮಾರು 500 ಕೋಟಿ ಅನುದಾನದ ಅಗತ್ಯತೆ ಇದ್ದು ದಯಮಾಡಿತ ಶೀಘ್ರದಲ್ಲಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ವಿನಂತಿ .

