“ಕರ್ನಾಟಕದಲ್ಲಿ ನಾಥ ಸಂಪ್ರದಾಯ” ದತ್ತಿ ಉಪನ್ಯಾಸ ಕಾರ್ಯಕ್ರಮ

0
26

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ “ಕರ್ನಾಟಕದಲ್ಲಿ ನಾಥ ಸಂಪ್ರದಾಯ” ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 25-09-2026ರ ಶುಕ್ರವಾರದಂದು ಪೂರ್ವಾಹ್ನ 11.30 ಗಂಟೆಗೆ ಕಾಲೇಜಿನ ಉಪನ್ಯಾಸ ಕೊಠಡಿಯಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಅವರು ಮಾತನಾಡಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಇಂತಹ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ನಿರಂತರವಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜದೊಂದಿಗೆ ಸಕ್ರಿಯವಾಗಿ ಬೆರೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಅವರು ಉದ್ಘಾಟಿಸಿ,ಅವರು ನಾಥ ಪಂಥದ ಮಹತ್ವ ಹಾಗೂ ಕರ್ನಾಟಕದ ಐತಿಹಾಸಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಅದರ ಪ್ರಸ್ತುತತೆ ಕುರಿತು ಮಾತನಾಡಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸುವ ಹಾಗೂ ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಕುರಿತು ಅವರ ತಿಳುವಳಿಕೆಯನ್ನು ಹೆಚ್ಚಿಸುವ ಇಂತಹ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಮ್ಮ ಕಾಲೇಜು ಸದಾ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ “ಕರ್ನಾಟಕದಲ್ಲಿ ನಾಥ ಸಂಪ್ರದಾಯ” ಎಂಬ ವಿಷಯದ ಕುರಿತು ವಿಶೇಷ ದತ್ತಿ ಉಪನ್ಯಾಸವನ್ನು ಗಾಯತ್ರಿ ಬಿ. ಕೆ., ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಸಂತ ಆಗ್ನೇಸ್ ಕಾಲೇಜು, ಮಂಗಳೂರು ಇವರು ನೀಡಿದರು. ತಮ್ಮ ಉಪನ್ಯಾಸದಲ್ಲಿ ಅವರು ನಾಥ ಸಂಪ್ರದಾಯದ ಉಗಮ, ಬೆಳವಣಿಗೆ, ಅದರ ಪ್ರಮುಖ ತಾತ್ವಿಕ ವಿಚಾರಗಳು ಹಾಗೂ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಮೇಲೆ ಅದರ ಪ್ರಭಾವವನ್ನು ವಿವರಿಸಿದರು.
ನಾಥ ಸಂಪ್ರದಾಯವು ಕೇವಲ ಧಾರ್ಮಿಕ ಪರಂಪರೆಯಾಗಿ ಮಾತ್ರವಲ್ಲದೆ, ಆಧ್ಯಾತ್ಮಿಕತೆ, ಯೋಗ, ತತ್ತ್ವಚಿಂತನೆ ಮತ್ತು ಸಾಮಾಜಿಕ ಜಾಗೃತಿಯೊಂದಿಗೆ ಬೆಸೆದುಕೊಂಡಿರುವ ಪ್ರಮುಖ ಪರಂಪರೆ ಎಂಬುದನ್ನು ಉಪನ್ಯಾಸಕರು ವಿವರಿಸಿದರು. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ನಾಥ ಪರಂಪರೆಯ ಪ್ರಭಾವ, ಅದರೊಂದಿಗೆ ಸಂಬಂಧ ಹೊಂದಿರುವ ಸಂತರ ಹಾಗೂ ಸಾಧಕರ ಚಿಂತನೆಗಳು ಮತ್ತು ಜನಜೀವನದೊಂದಿಗೆ ಈ ಪರಂಪರೆ ಹೊಂದಿರುವ ಸಂಬಂಧದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು.

ಉಪನ್ಯಾಸವು ವಿಷಯದ ಐತಿಹಾಸಿಕ ಹಿನ್ನೆಲೆ ಹಾಗೂ ಸಮಕಾಲೀನ ಪ್ರಸ್ತುತತೆಯನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಮೂಡಿಸಿತು. ಕನ್ನಡ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಕೇವಲ ಪಠ್ಯಪುಸ್ತಕಗಳ ಮೂಲಕವಲ್ಲದೆ, ಇಂತಹ ಉಪನ್ಯಾಸಗಳು ಹಾಗೂ ಸಂವಾದಗಳ ಮೂಲಕ ತಿಳಿದುಕೊಳ್ಳುವುದು ಅಗತ್ಯ ಎಂಬ ಸಂದೇಶವನ್ನು ನೀಡಿದರು.

ಸಂಚಾಲಕರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಸ್ ಡಿ ಎಂ ಕಾನೂನು ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀಯುತ ಪುಷ್ಪರಾಜ್ ಕೆ. ಅವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಕನ್ನಡ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಒತ್ತಿಹೇಳಿದರು. ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ, ಸಮಾಜದ ವಿವಿಧ ಆಯಾಮಗಳನ್ನು ಅರಿತುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಉದ್ದೇಶವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಡಾ. ಪಿ. ಕೇಶವನಾಥ್ ಕಾರ್ಯದರ್ಶಿ, ನಾಥ ಪಂಥ ಪ್ರಚಾರ ಸಮಿತಿ, ಕರ್ನಾಟಕ ಇವರು ಮಾತನಾಡಿ, ಕರ್ನಾಟಕ ನಾಥ ಪಂಥಗಳ ವಿವರಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ದತ್ತಿ: ದಿ|ಟೈಲರ್ ಕೊಗ್ಗ ಜೋಗಿ ಗಂಗಮ್ಮ ಸ್ಮರಣಾರ್ಥ ದಾನಿಗಳು ದಿ|ಆನಂದನಾಥ್ ಇವರ ಕುಟುಂಬಸ್ಥರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಅವರ ಉಪಸ್ಥಿತಿಯು ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿತು. ಕನ್ನಡ ವಿಭಾಗದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಸುಚಿತ್ರ ಪಿ. ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಕು. ಸರಸ್ವತಿ ಚಿನ್ನಾಕಟ್ಟಿ ವಂದಿಸಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿ ಶಶಾಂಕ್ ಕಾರ್ಯಕ್ರಮವನ್ನು ನಿರೂಪಿಸಿದರು.