ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2025–26ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಸಾಹಿತ್ಯ, ಜಾನಪದ, ನಾಟಕ, ಸಿನಿಮಾ, ಗಣಕ ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಆರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.
2025ನೇ ಸಾಲಿನ ಪ್ರಶಸ್ತಿಗೆ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಿಂದ ಹಿರಿಯ ವಿದ್ವಾಂಸ ಪ್ರೊ. ಬಿ. ಶಿವರಾಮ ಶೆಟ್ಟಿ, ಜಾನಪದ ಕ್ಷೇತ್ರದಿಂದ ಹಿರಿಯ ಡೋಲು ವಾದನ ಕಲಾವಿದ ಕುಡ್ಡು ಕೊರಗ ಪಾಂಗಾಳ ಹಾಗೂ ನಾಟಕ–ಸಿನಿಮಾ ಕ್ಷೇತ್ರದಿಂದ ಖ್ಯಾತ ನಟಿ, ನಿರ್ದೇಶಕಿ ಉಷಾ ಭಂಡಾರಿ ಆಯ್ಕೆಯಾಗಿದ್ದಾರೆ.
2026ನೇ ಸಾಲಿನ ಪ್ರಶಸ್ತಿಗೆ ಗಣಕ ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಿಂದ ಕಿನ್ನಿಕಂಬಳ ಪದ್ಮನಾಭರಾವ್ (ಕೆ.ಪಿ. ರಾವ್), ಜಾನಪದ ಕ್ಷೇತ್ರದಿಂದ ದೈವ ನರ್ತಕ ನೇಮು ಪರವ ಹಾಗೂ ನಾಟಕ–ಸಿನಿಮಾ ಕ್ಷೇತ್ರದಿಂದ ಹಿರಿಯ ರಂಗಕರ್ಮಿ, ನಿರ್ದೇಶಕ ಸುಧಾಕರ ಬನ್ನಂಜೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ ₹50,000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
ಪ್ರೊ. ಬಿ. ಶಿವರಾಮ ಶೆಟ್ಟಿ
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 38 ವರ್ಷಗಳ ಕಾಲ ಅಧ್ಯಾಪನ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ. ಬಿ. ಶಿವರಾಮ ಶೆಟ್ಟಿ ಅವರು ತುಳುನಾಡಿನ ಪ್ರಮುಖ ವಿದ್ವಾಂಸರಾಗಿದ್ದಾರೆ. ‘ತುಳುನಾಡಿನ ಸಸ್ಯ ಜಾನಪದ’ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪಡೆದಿರುವ ಅವರು ಮಂಗಳೂರು ವಿಶ್ವವಿದ್ಯಾನಿಲಯದ ತುಳು ವಿಭಾಗದ ಸ್ಥಾಪಕ ಸಂಯೋಜಕರಾಗಿ ಹಾಗೂ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 15ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.
ಕುಡ್ಡು ಕೊರಗ ಪಾಂಗಾಳ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಪಾಂಗಾಳದವರಾದ ಕುಡ್ಡು ಕೊರಗ ಪಾಂಗಾಳ ಅವರು ನಾಲ್ಕು ದಶಕಗಳಿಂದ ತುಳುನಾಡಿನ ಸಾಂಪ್ರದಾಯಿಕ ಡೋಲು ವಾದನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬುಟ್ಟಿ ಹೆಣೆಯುವ ಕಾಯಕದ ಜೊತೆಗೆ ಡೋಲು ವಾದನ ಮತ್ತು ‘ಬಿರ್ದುದ ಪಾಟ್’ ಹಾಡುವುದರಲ್ಲಿ ನಿಪುಣರಾಗಿದ್ದಾರೆ. ಕೊರಗ ಸಮುದಾಯದ ಗುರಿಕಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಉಷಾ ಭಂಡಾರಿ
ಮೂಲತಃ ಉಳ್ಳಾಲದವರಾದ ಉಷಾ ಭಂಡಾರಿ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನೀನಾಸಂನ ಹಳೆಯ ವಿದ್ಯಾರ್ಥಿನಿಯಾಗಿರುವ ಅವರು ಬೆಂಗಳೂರು ವಿಶ್ವವಿದ್ಯಾನಿಲಯದ ನಾಟಕ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕಳೆದ ಮೂರೂವರೆ ದಶಕಗಳಿಂದ ನಟಿ, ನಿರ್ದೇಶಕಿ, ಕಂಠದಾನ ಕಲಾವಿದೆ ಹಾಗೂ ನಟನಾ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಳು ಮತ್ತು ಕನ್ನಡದ ಹಲವು ನಾಟಕ, ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಕೆ.ಪಿ. ರಾವ್
ಭಾರತೀಯ ಭಾಷೆಗಳನ್ನು ಗಣಕಯಂತ್ರಕ್ಕೆ ಅಳವಡಿಸುವಲ್ಲಿ ಮಹತ್ವದ ಕೊಡುಗೆ ನೀಡಿರುವ ಕಿನ್ನಿಕಂಬಳ ಪದ್ಮನಾಭರಾವ್ (ಕೆ.ಪಿ. ರಾವ್) ಅವರು ತುಳು ಲಿಪಿಯ ತಂತ್ರಾಂಶ ಸಿದ್ಧಪಡಿಸುವಲ್ಲಿಯೂ ಪ್ರಮುಖ ಸಂಶೋಧನೆ ನಡೆಸಿದ್ದಾರೆ. ಅವರ ತಂತ್ರಾಂಶದ ನೆರವಿನಿಂದ ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ತುಳು ನಿಘಂಟಿನ ಆರು ಸಂಪುಟಗಳು ಮುದ್ರಣಗೊಂಡಿವೆ. ತುಳುವಿನ ಧ್ವನಿವಿಜ್ಞಾನಕ್ಕೆ ಟೈಪಿಂಗ್ ಕಾರ್ಯಕ್ರಮ ರೂಪಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ನೇಮು ಪರವ
ಪುತ್ತೂರು ತಾಲೂಕಿನ ಕೆಯ್ಯರು ಗ್ರಾಮದ ನೇಮು ಪರವ ಅವರು 16ನೇ ವಯಸ್ಸಿನಿಂದಲೇ ದೈವ ನರ್ತನ ಸೇವೆ ಆರಂಭಿಸಿದ್ದಾರೆ. ಪುತ್ತೂರು, ಸುಳ್ಯ, ಬಂಟ್ವಾಳ ಹಾಗೂ ಕೊಡಗಿನ ಪ್ರಮುಖ ದೈವಸ್ಥಾನಗಳು, 18 ಬ್ರಹ್ಮ ಬೈದರ್ಕಳ ಗರಡಿಗಳು ಹಾಗೂ 25ಕ್ಕೂ ಹೆಚ್ಚು ಪುರಾತನ ಕ್ಷೇತ್ರಗಳಲ್ಲಿ ಪಂಜುರ್ಲಿ, ಪಿಲಿಚಾಮುಂಡಿ, ರಕೇಶ್ವರಿ ಸೇರಿದಂತೆ ವಿವಿಧ ದೈವಗಳ ನರ್ತನ ಸೇವೆ ಸಲ್ಲಿಸುತ್ತಿದ್ದಾರೆ.
ಸುಧಾಕರ ಬನ್ನಂಜೆ
ಉಡುಪಿಯ ಬನ್ನಂಜೆ ಮೂಲದವರಾದ ಸುಧಾಕರ ಬನ್ನಂಜೆ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ನಾಲ್ಕು ದಶಕಗಳಿಂದ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 64 ತುಳು ಹಾಗೂ 24 ಕನ್ನಡ ನಾಟಕಗಳನ್ನು ರಚಿಸಿರುವ ಅವರು ನೂರಾರು ನಾಟಕಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೂರದರ್ಶನ ಹಾಗೂ ವಿವಿಧ ವಾಹಿನಿಗಳಿಗಾಗಿ ಧಾರಾವಾಹಿ ಮತ್ತು ಕಿರುಚಿತ್ರಗಳನ್ನೂ ನಿರ್ಮಿಸಿದ್ದಾರೆ.
ತುಳು ಭಾಷೆ, ಸಾಹಿತ್ಯ, ಜಾನಪದ, ಕಲೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಆರು ಸಾಧಕರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

