ರಾಷ್ಟ್ರೀಯ ದಂತ ವೈದ್ಯರ ದಿನ – ಡಿಸೆಂಬರ್ 24

0
70

ಭಾರತ ದೇಶ ಕಂಡ ಮಹಾನ್ ಹಾಗೂ ಅಪ್ರತಿಮ ದಂತ ವೈದ್ಯರಲ್ಲಿ ಒಬ್ಬರಾದ ಡಾ|| ರಫಿಯುದ್ದೀನ್ ಅಹ್ಮದ್ (1890–1965) ಅವರ ಜನ್ಮದಿನದ ಅಂಗವಾಗಿ ಇಂದು ದೇಶಾದ್ಯಂತ “ರಾಷ್ಟ್ರೀಯ ದಂತ ವೈದ್ಯರ ದಿನ” ವನ್ನು ಆಚರಿಸಲಾಗುತ್ತಿದೆ.

1890ರ ಡಿಸೆಂಬರ್ 24 ರಂದು ಪಶ್ಚಿಮ ಬಂಗಾಳದ ಬರ್ದಾನ್‍ಪುರದಲ್ಲಿ ಜನಿಸಿದ ಡಾ|| ಆರ್. ಅಹ್ಮದ್ ಅವರು, 1908ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬಳಿಕ ಅಮೇರಿಕಾದ ಲೋವಾ ಯುನಿವರ್ಸಿಟಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡಿ 1915ರಲ್ಲಿ ದಂತ ವೈದ್ಯಕೀಯ ಪದವಿ ಪಡೆದರು. ಬೊಸ್ಟನ್ ಹಾಗೂ ಮೆಸ್ಸಾಚುಸೆಟ್ಸ್‌ನಲ್ಲಿ ಸೇವೆ ಸಲ್ಲಿಸಿದ ನಂತರ, ಅಮೇರಿಕಾದಲ್ಲೇ ಉತ್ತಮ ಭವಿಷ್ಯ ಇದ್ದರೂ ತಾಯ್ನಾಡಿನ ಸೇವೆಗಾಗಿ 1919ರಲ್ಲಿ ಭಾರತಕ್ಕೆ ಹಿಂದಿರುಗಿದರು.

ಅವರ ಪ್ರಯತ್ನದಿಂದಲೇ 1920ರಲ್ಲಿ ಭಾರತದಲ್ಲೇ ಮೊದಲ ದಂತ ವೈದ್ಯಕೀಯ ಕಾಲೇಜು ಕೋಲ್ಕತ್ತಾದಲ್ಲಿ ಸ್ಥಾಪನೆಯಾಯಿತು. ಆರಂಭದಲ್ಲಿ “ಕೊಲ್ಕತ್ತಾ ದಂತ ವೈದ್ಯಕೀಯ ಕಾಲೇಜು” ಎಂದು ಕರೆಯಲ್ಪಟ್ಟ ಈ ಸಂಸ್ಥೆಗೆ, 1950ರಲ್ಲಿ ಅವರ ಸಾಧನೆಯನ್ನು ಗೌರವಿಸಿ “ಆರ್. ಅಹ್ಮದ್ ದಂತ ವೈದ್ಯಕೀಯ ಕಾಲೇಜು” ಎಂದು ಮರುನಾಮಕರಣ ಮಾಡಲಾಯಿತು. 1949ರಲ್ಲಿ ಕಾಲೇಜಿಗೆ ಕೋಲ್ಕತ್ತಾ ವಿಶ್ವವಿದ್ಯಾಲಯದ ಮಾನ್ಯತೆ ದೊರಕಿದ್ದು, ನಂತರ ಅದನ್ನು ಪಶ್ಚಿಮ ಬಂಗಾಳ ಸರ್ಕಾರಕ್ಕೆ ದಾನವಾಗಿ ನೀಡಿದರು.

ಡಾ|| ಆರ್. ಅಹ್ಮದ್ ಅವರು 1920ರಿಂದ 1950ರವರೆಗೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 1925ರಲ್ಲಿ ಬಂಗಾಳ ದಂತ ವೈದ್ಯರ ಸಂಘ ಸ್ಥಾಪಿಸಿ, ದಂತ ವೈದ್ಯಕೀಯ ಜರ್ನಲ್‌ನ್ನು ಆರಂಭಿಸಿದರು. 1939ರಲ್ಲಿ ಬಂಗಾಳ ದಂತ ವೈದ್ಯರ ಕಾಯ್ದೆ ಜಾರಿಗೆ ಪ್ರಮುಖ ಪಾತ್ರವಹಿಸಿದ್ದು, ಇದರ ಆಧಾರದ ಮೇಲೆಯೇ 1948ರಲ್ಲಿ ಭಾರತೀಯ ದಂತ ವೈದ್ಯರ ಕಾಯ್ದೆ ಜಾರಿಗೆ ಬಂದಿತು. 1954ರಿಂದ 1958ರವರೆಗೆ ಭಾರತೀಯ ದಂತ ವೈದ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಅವರ ಅಮೋಘ ಸೇವೆಯನ್ನು ಗುರುತಿಸಿ ಅಂತರಾಷ್ಟ್ರೀಯ ದಂತ ಕಾಲೇಜು, ರಾಯಲ್ ಕಾಲೇಜ್ ಆಫ್ ಸರ್ಜನ್ಸ್ (ಇಂಗ್ಲೆಂಡ್) ಮತ್ತು ಫಿಯರಿ ಪೌಚಾರ್ಡ್ ಅಕಾಡೆಮಿ ಪೆಲೋಷಿಪ್‌ಗಳನ್ನು ನೀಡಿವೆ. 1964ರಲ್ಲಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

ಬಡವರು, ದೀನದಲಿತರು ಹಾಗೂ ಸಮಾಜದ ಕೆಳಸ್ತರದ ಜನರಿಗೆ ದಂತ ಚಿಕಿತ್ಸೆ ಲಭ್ಯವಾಗಬೇಕೆಂಬ ಧ್ಯೇಯದೊಂದಿಗೆ ಜೀವನಪೂರ್ತಿ ಸೇವೆ ಸಲ್ಲಿಸಿದ ಡಾ|| ಆರ್. ಅಹ್ಮದ್ ಅವರನ್ನು ಭಾರತೀಯ ದಂತ ವೈದ್ಯಕೀಯ ಕ್ಷೇತ್ರದ ಪಿತಾಮಹ ಎಂದು ಗೌರವದಿಂದ ಕರೆಯಲಾಗುತ್ತದೆ. 1965ರ ಜನವರಿ 18ರಂದು ಅವರು ವಿಧಿವಶರಾದರು.

ಡಾ|| ಆರ್. ಅಹ್ಮದ್ ಅವರ ಸ್ಮರಣಾರ್ಥ ಭಾರತೀಯ ದಂತ ವೈದ್ಯರ ಸಂಘವು ಪ್ರತಿವರ್ಷ ಡಿಸೆಂಬರ್ 24ರಂದು ದೇಶಾದ್ಯಂತ ರಾಷ್ಟ್ರೀಯ ದಂತ ವೈದ್ಯರ ದಿನವನ್ನು ಆಚರಿಸಿ, ಅವರ ಆದರ್ಶಗಳು ಹಾಗೂ ಮಾನವೀಯ ವೈದ್ಯಕೀಯ ಸೇವೆಯ ಮೌಲ್ಯಗಳನ್ನು ಸ್ಮರಿಸುತ್ತದೆ.

ಡಾ|| ಮುರಲೀ ಮೋಹನ ಚೂಂತಾರು.
ದಂತ ವೈದ್ಯರು

LEAVE A REPLY

Please enter your comment!
Please enter your name here