ಬೆಂಗಳೂರು : ಬೆಳಕು ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಸೆ.27ರಂದು ಭಾನುವಾರ ಬೆಂಗಳೂರಿನ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿರುವ 126ನೇ ಚಿಗುರು ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀಧರ್ ಪಂಡಿತ್ ಮೈತಡ್ಕ ಅವರಿಗೆ ‘ಅಣ್ಣಪ್ಪ ಮೇಟಿಗೌಡ ನ್ಯಾಷನಲ್ ಐಕಾನ್ ಅವಾರ್ಡ್’ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದವರಾದ ಶ್ರೀಧರ್ ಪಂಡಿತ್ ಮೈತಡ್ಕ ಅವರು ಸಂಗೀತ, ಧಾರ್ಮಿಕ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ದೈವ ನರ್ತಕರಾಗಿ ತುಳುನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅವರು, ನಾಟಿ ವೈದ್ಯರಾಗಿಯೂ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ಇದರೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಶ್ರೀಧರ್ ಪಂಡಿತ್ ಮೈತಡ್ಕ ಅವರು ಪುತ್ತೂರು ತಾಲೂಕು ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಧಾರ್ಮಿಕ, ಸಾಂಸ್ಕೃತಿಕ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ‘ನ್ಯಾಷನಲ್ ಐಕಾನ್ ಅವಾರ್ಡ್’ಗೆ ಆಯ್ಕೆ ಮಾಡಲಾಗಿದೆ ಎಂದು ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ.
ಸೆ.27ರಂದು ನಡೆಯಲಿರುವ 126ನೇ ಚಿಗುರು ಸಮ್ಮೇಳನದ ವೇದಿಕೆಯಲ್ಲಿ ಶ್ರೀಧರ್ ಪಂಡಿತ್ ಮೈತಡ್ಕ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀಧರ್ ಪಂಡಿತ್ ಮೈತಡ್ಕ ಅವರಿಗೆ ಬೆಳಕು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ಸಮಾಜಮುಖಿ ಸೇವೆಗೆ ಶುಭ ಹಾರೈಸಿದ್ದಾರೆ.
