ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಯುವ ವಿಜ್ಞಾನಿ, ಸ್ವತಂತ್ರ ನಾವೀನ್ಯಕಾರ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕರಾದ ದೀಪಕ್ ಎ.ಎಸ್. ಅವರಿಗೆ Jivran Foundation ವತಿಯಿಂದ ‘ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನ್ಯಾಷನಲ್ ಇನ್‌ಸ್ಪಿರೇಷನಲ್ ಅವಾರ್ಡ್ – 2026’ ಪ್ರದಾನ ಮಾಡಿ ಗೌರವಿಸಲಾಗಿದೆ.

Jivran Foundation ಆಯೋಜಿಸಿದ್ದ ಆನ್‌ಲೈನ್ ರೆಕಗ್ನಿಷನ್ ಕಾರ್ಯಕ್ರಮದಲ್ಲಿ ದೀಪಕ್ ಎ.ಎಸ್. ಅವರು ನಾಮನಿರ್ದೇಶನ ಸಲ್ಲಿಸಿದ್ದು, ಸಂಬಂಧಪಟ್ಟ ತಜ್ಞರ ತಂಡವು ಅವರ ಸಾಧನೆ ಹಾಗೂ ಕೊಡುಗೆಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ವಿಜ್ಞಾನ, ನಾವೀನ್ಯತೆ, ಬಾಹ್ಯಾಕಾಶ ಮತ್ತು ರಕ್ಷಣಾ ಸಂಶೋಧನೆ, ವಿಜ್ಞಾನ ಸಂವಹನ ಹಾಗೂ ರಾಷ್ಟ್ರಸೇವೆಯ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇತ್ತೀಚೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಇಸ್ರೋ (ISRO) ಮತ್ತು ಡಿಆರ್‌ಡಿಒ (DRDO) ಕುರಿತ 2,050ಕ್ಕೂ ಹೆಚ್ಚು ವೈಜ್ಞಾನಿಕ ಮಾಹಿತಿಗಳನ್ನು ಒಬ್ಬ ವ್ಯಕ್ತಿಯಾಗಿ ಸಂಗ್ರಹಿಸಿ ದಾಖಲಿಸಿದ ಸಾಧನೆಗಾಗಿ ದೀಪಕ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಈ ಸಾಧನೆಯು ಭಾರತದ ವೈಜ್ಞಾನಿಕ ಸಾಧನೆಗಳನ್ನು ಯುವಜನರಿಗೆ ಪರಿಚಯಿಸುವ ಹಾಗೂ ವಿಜ್ಞಾನ ಮನೋಭಾವ ಬೆಳೆಸುವ ಅವರ ಬದ್ಧತೆಯನ್ನು ಪ್ರತಿಬಿಂಬಿಸಿದೆ.
ದೀಪಕ್ ಎ.ಎಸ್. ಅವರು DRDO Dare to Dream, Innovations for Defence Excellence (iDEX) ಹಾಗೂ ADITI ಸೇರಿದಂತೆ ಹಲವು ರಾಷ್ಟ್ರೀಯ ನಾವೀನ್ಯತಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ರಕ್ಷಣಾ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ವದೇಶಿ ಸಂಶೋಧನೆ ಮತ್ತು ಹೊಸ ಪರಿಕಲ್ಪನೆಗಳ ಅಭಿವೃದ್ಧಿಗೆ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಅಲ್ಲದೆ, MyGov ಹಾಗೂ ಮೇರಾ ಯುವ ಭಾರತ (MY Bharat) ಸ್ವಯಂಸೇವಕರಾಗಿ ವಿವಿಧ ರಾಷ್ಟ್ರೋತ್ಥಾನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. Young Scientist Group, Deepak Thoughts ಮತ್ತು ಯುವದೀಪ ವೇದಿಕೆಗಳ ಮೂಲಕ ಯುವಜನರಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನಾ ಮನೋಭಾವ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇದೇ ವೇಳೆ ಭಾರತ ದೀಪ R&D ಎಂಬ ಹೊಸ ಸಂಶೋಧನಾ ಉಪಕ್ರಮವನ್ನು ಸ್ಥಾಪಿಸಿ ನಾವೀನ್ಯತೆಯ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ದೀಪಕ್ ಎ.ಎಸ್., “ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ, ವೈಜ್ಞಾನಿಕ ದೃಷ್ಟಿಕೋನ ಮತ್ತು ರಾಷ್ಟ್ರಸೇವೆಯ ಆದರ್ಶಗಳು ನನಗೆ ಸದಾ ಸ್ಫೂರ್ತಿಯಾಗಿವೆ. ಈ ಗೌರವ ನನ್ನ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ದೇಶದ ರಕ್ಷಣಾ, ಬಾಹ್ಯಾಕಾಶ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಕೊಡುಗೆ ನೀಡಲು ಇನ್ನಷ್ಟು ಶ್ರಮಿಸುವ ಸಂಕಲ್ಪವನ್ನು ಬಲಪಡಿಸಿದೆ” ಎಂದು ಹೇಳಿದರು.
ಯುವ ವಿಜ್ಞಾನಿಗಳಲ್ಲಿ ವೈಜ್ಞಾನಿಕ ಚಿಂತನೆ, ಸಂಶೋಧನಾ ಮನೋಭಾವ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ದೀಪಕ್ ಎ.ಎಸ್. ತಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರಿಸುತ್ತಿದ್ದು, ಭವಿಷ್ಯದಲ್ಲಿ ಭಾರತದ ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುವ ಗುರಿಯನ್ನು ಹೊಂದಿದ್ದಾರೆ.
ದೀಪಕ್ ಎ.ಎಸ್. ಅವರು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸದಾಶಿವ ಗೌಡ ಮತ್ತು ಮೋಹಿನಿ ದಂಪತಿಯ ಪುತ್ರರಾಗಿದ್ದಾರೆ.

