ಸಂಶೋಧನಾ ಪ್ರಬಂಧಗಳಿಗೆ ಆಹ್ವಾನ – ಆಯ್ಕೆಯಾದ ಪ್ರಬಂಧಗಳ ಪುಸ್ತಕ ಪ್ರಕಟಣೆ
ಬೆಂಗಳೂರು : ತುಳು ಭಾಷೆಯ ಪ್ರಾಚೀನ ಸಾಹಿತ್ಯಿಕ ಪರಂಪರೆ, ಲಿಖಿತ ಮತ್ತು ಮೌಖಿಕ ಕಾವ್ಯ ಸಂಪತ್ತು, ತಾತ್ವಿಕ ಚಿಂತನೆ ಹಾಗೂ ಸಾಂಸ್ಕೃತಿಕ ವೈಭವವನ್ನು ರಾಷ್ಟ್ರೀಯ ಶೈಕ್ಷಣಿಕ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಅಲಯನ್ಸ್ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪರಂಪರೆ ಶ್ರೇಷ್ಠತಾ ಕೇಂದ್ರ (Centre of Excellence in Indian Knowledge Systems) ಮತ್ತು ತುಳುವರ್ಲ್ಡ್ ಫೌಂಡೇಶನ್ ಜಂಟಿಯಾಗಿ 2027ರ ಜನವರಿ 29 ಮತ್ತು 30ರಂದು ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿವೆ.
“ಪ್ರಾಚೀನ ಮತ್ತು ಸಮಕಾಲೀನ ತುಳು ಕಾವ್ಯ ಪರಂಪರೆಗಳು: ಪಠ್ಯ ಸಂಪ್ರದಾಯ, ಮೌಖಿಕ ಮಹಾಕಾವ್ಯಗಳು, ಕಾವ್ಯ ಮೀಮಾಂಸೆ, ತತ್ವಶಾಸ್ತ್ರ ಮತ್ತು ಸಾಂಸ್ಕೃತಿಕ ಪರಂಪರೆ” ಎಂಬುದು ವಿಚಾರ ಸಂಕಿರಣದ ಕೇಂದ್ರ ವಿಷಯವಾಗಿದೆ.
ತುಳು ಭಾಷೆಯ ಸಾಹಿತ್ಯ ಪರಂಪರೆಯು ಕೇವಲ ಲಿಖಿತ ಕೃತಿಗಳಿಗೆ ಸೀಮಿತವಾಗಿರದೆ, ತಲೆಮಾರುಗಳಿಂದ ಮೌಖಿಕವಾಗಿ ಸಂರಕ್ಷಿಸಲ್ಪಟ್ಟಿರುವ ಮಹಾಕಾವ್ಯಗಳು, ಪಾಡ್ದನಗಳು, ಸಂಧಿಗಳು, ದೈವಾರಾಧನಾ ಸಾಹಿತ್ಯ, ಜನಪದ ಗೀತೆಗಳು ಮತ್ತು ಪುರಾಣ ಕಥನಗಳನ್ನೂ ಒಳಗೊಂಡಿದೆ. ಅರುಣಾಬ್ಜ ಕವಿಯ ತುಳು ಮಹಾಭಾರತೋ, ವಿಷ್ಣುತುಂಗನ ಶ್ರೀ ಭಾಗವತೋ, ಕಾವೇರಿ, ತುಳು ಕರ್ಣಪರ್ವ ಮತ್ತು ತುಳು ದೇವಿ ಮಹಾತ್ಮೆ ಮೊದಲಾದ ಪ್ರಾಚೀನ ಕೃತಿಗಳು ತುಳುವಿನ ಕಾವ್ಯ ಸೃಜನಶೀಲತೆ, ಭಾಷಾ ವೈಶಿಷ್ಟ್ಯ, ಕಥನ ಪರಂಪರೆ ಮತ್ತು ತಾತ್ವಿಕ ಚಿಂತನೆಗಳಿಗೆ ಮಹತ್ವದ ಆಕರಗಳಾಗಿವೆ.
ಇದರೊಂದಿಗೆ ಸಿರಿ ಪಾಡ್ದನ, ಕೋಟಿ–ಚೆನ್ನಯ ಪಾಡ್ದನ, ಕಲ್ಕುಡ–ಕಲ್ಲುರ್ಟಿ ಪಾಡ್ದನ, ಬಿರ್ಮೆರ್ ಮತ್ತು ವಿವಿಧ ದೈವಿಕ ಸಂಧಿ ಪರಂಪರೆಗಳು ತುಳುವಿನ ಮೌಖಿಕ ಮಹಾಕಾವ್ಯ ಸಾಹಿತ್ಯದ ವಿಶಿಷ್ಟ ಸಂಪತ್ತಾಗಿವೆ. ಇವುಗಳಲ್ಲಿ ತುಳುನಾಡಿನ ಇತಿಹಾಸ, ಸಾಮಾಜಿಕ ವ್ಯವಸ್ಥೆ, ಜನಜೀವನ, ಪ್ರಕೃತಿ ಜ್ಞಾನ, ನೈತಿಕ ಮೌಲ್ಯಗಳು, ಮಹಿಳಾ ಅಭಿವ್ಯಕ್ತಿ ಮತ್ತು ಸಮುದಾಯದ ಸಾಂಸ್ಕೃತಿಕ ಸ್ಮೃತಿಗಳು ಕಾವ್ಯಾತ್ಮಕವಾಗಿ ಅಭಿವ್ಯಕ್ತಗೊಂಡಿವೆ.
ಪ್ರಾಚೀನ ಕಾವ್ಯ ಪರಂಪರೆಯಿಂದ ಆಧುನಿಕ ಮತ್ತು ಸಮಕಾಲೀನ ತುಳು ಕಾವ್ಯದವರೆಗಿನ ಬೆಳವಣಿಗೆ, ಸಾಹಿತ್ಯಿಕ ಪ್ರಯೋಗಗಳು, ಕಾವ್ಯ ಮೀಮಾಂಸೆ, ಛಂದಸ್ಸು, ಭಾಷಾ ವೈಶಿಷ್ಟ್ಯ, ಧಾರ್ಮಿಕ ಮತ್ತು ತಾತ್ವಿಕ ಚಿಂತನೆಗಳು ಹಾಗೂ ಭಾರತೀಯ ಜ್ಞಾನ ಪರಂಪರೆಯೊಂದಿಗಿನ ತುಳುವಿನ ಸಂಬಂಧಗಳನ್ನು ಈ ವಿಚಾರ ಸಂಕಿರಣದಲ್ಲಿ ವಿದ್ವತ್ಪೂರ್ಣವಾಗಿ ಚರ್ಚಿಸಲಾಗುವುದು.
ವಿಚಾರ ಸಂಕಿರಣಕ್ಕೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು, ಸಾಹಿತಿಗಳು, ಕವಿಗಳು, ಭಾಷಾ ತಜ್ಞರು, ಸಾಹಿತ್ಯ ವಿಮರ್ಶಕರು, ಜಾನಪದ ಸಂಶೋಧಕರು, ಇತಿಹಾಸಕಾರರು ಹಾಗೂ ತುಳು ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನಕಾರರಿಂದ ಮೌಲಿಕ ಹಾಗೂ ಈ ಹಿಂದೆ ಪ್ರಕಟವಾಗದ ಸಂಶೋಧನಾ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಪ್ರಾಚೀನ ತುಳು ಕಾವ್ಯಗಳ ಅಧ್ಯಯನ, ತುಳು–ತಿಗಳಾರಿ ಹಸ್ತಪ್ರತಿಗಳು, ಶಾಸನಗಳು, ಪಾಡ್ದನಗಳು, ಸಂಧಿಗಳು, ಮೌಖಿಕ ಮಹಾಕಾವ್ಯಗಳು, ದೈವಾರಾಧನಾ ಸಾಹಿತ್ಯ, ತುಳು ಕಾವ್ಯಗಳಲ್ಲಿನ ರಸ, ಧ್ವನಿ, ಅಲಂಕಾರ ಮತ್ತು ಛಂದಸ್ಸು, ತುಳು ಸಾಹಿತ್ಯದ ತಾತ್ವಿಕ ಹಾಗೂ ಸಾಂಸ್ಕೃತಿಕ ಆಯಾಮಗಳು, ಸಮಕಾಲೀನ ತುಳು ಕಾವ್ಯದ ಬೆಳವಣಿಗೆ, ತುಲನಾತ್ಮಕ ಸಾಹಿತ್ಯ ಮತ್ತು ಡಿಜಿಟಲ್ ದಾಖಲೀಕರಣ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಸಂಶೋಧನೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು.
ಈ ವಿಚಾರ ಸಂಕಿರಣದ ವಿಶೇಷ ಆಕರ್ಷಣೆಯೆಂದರೆ, ಶೈಕ್ಷಣಿಕ ಪರಿಶೀಲನೆಯ ಮೂಲಕ ಆಯ್ಕೆಯಾಗುವ ಸಂಶೋಧನಾ ಪ್ರಬಂಧಗಳನ್ನು ಸಂಪಾದಿತ ಸಂಶೋಧನಾ ಗ್ರಂಥದ ರೂಪದಲ್ಲಿ ಪ್ರಕಟಿಸಲಾಗುವುದು. ಈ ಪುಸ್ತಕವನ್ನು ವಿಚಾರ ಸಂಕಿರಣದ ಸಂದರ್ಭದಲ್ಲಿಯೇ ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು. ಈ ಮೂಲಕ ತುಳು ಭಾಷೆಯ ಪ್ರಾಚೀನ ಮತ್ತು ಸಮಕಾಲೀನ ಕಾವ್ಯ ಪರಂಪರೆಯ ಕುರಿತು ಮಹತ್ವದ ಸಂಶೋಧನೆಗಳು ಶಾಶ್ವತ ದಾಖಲೆಗಳಾಗಿ ಉಳಿಯಲಿದ್ದು, ಮುಂದಿನ ಪೀಳಿಗೆಯ ಸಂಶೋಧಕರಿಗೆ ಆಕರ ಗ್ರಂಥವಾಗಿ ಉಪಯುಕ್ತವಾಗಲಿವೆ.
ಸಂಶೋಧನಾ ಪ್ರಬಂಧದ ಸ್ವರೂಪ ಮತ್ತು ನಿಯಮಗಳು
- ಪೂರ್ಣ ಸಂಶೋಧನಾ ಪ್ರಬಂಧವು 7ರಿಂದ 10 ಪುಟಗಳ ಮಿತಿಯಲ್ಲಿರಬೇಕು.
- ಉಲ್ಲೇಖಗಳು, ಅಡಿಟಿಪ್ಪಣಿಗಳು ಮತ್ತು ಗ್ರಂಥಸೂಚಿಯನ್ನು ಪ್ರಬಂಧದಲ್ಲಿ ಸೇರಿಸಬೇಕು.
- ಪ್ರಬಂಧವು ಮೌಲಿಕ ಮತ್ತು ಈ ಹಿಂದೆ ಪ್ರಕಟವಾಗದ ಸಂಶೋಧನೆಯಾಗಿರಬೇಕು.
- ಸೂಕ್ತ ಆಕರಗಳು, ದಾಖಲೆಗಳು, ಉಲ್ಲೇಖಗಳು ಮತ್ತು ವೈಜ್ಞಾನಿಕ ಸಂಶೋಧನಾ ವಿಧಾನಗಳನ್ನು ಅನುಸರಿಸಬೇಕು.
- ಆಯ್ಕೆಯಾದ ಪ್ರಬಂಧಗಳನ್ನು ಶೈಕ್ಷಣಿಕ ಪರಿಶೀಲನೆಯ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಪ್ರಬಂಧ ಸಲ್ಲಿಕೆಯ ಕೊನೆಯ ದಿನಾಂಕಗಳು
- ಸಂಶೋಧನಾ ಸಾರಾಂಶ ಸಲ್ಲಿಕೆ: 10 ಡಿಸೆಂಬರ್ 2026
- ಪೂರ್ಣ ಸಂಶೋಧನಾ ಪ್ರಬಂಧ ಸಲ್ಲಿಕೆ: 25 ಡಿಸೆಂಬರ್ 2026
- ರಾಷ್ಟ್ರೀಯ ವಿಚಾರ ಸಂಕಿರಣ: 29 ಮತ್ತು 30 ಜನವರಿ 2027
ಪ್ರಬಂಧ ಸಲ್ಲಿಸುವ ಇಮೇಲ್
ಎಲ್ಲಾ ಸಂಶೋಧನಾ ಸಾರಾಂಶಗಳು ಮತ್ತು ಪೂರ್ಣ ಸಂಶೋಧನಾ ಪ್ರಬಂಧಗಳನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು:
tuluworld@gmail.com
ಇಮೇಲ್ ವಿಷಯದಲ್ಲಿ National Seminar on Ancient and Contemporary Tulu Kavya Paramparagalu – Paper Submission ಎಂದು ನಮೂದಿಸಬೇಕು.
ತುಳು ಸಾಹಿತ್ಯದ ಅಮೂಲ್ಯ ಪರಂಪರೆಯನ್ನು ಸಂಶೋಧನೆ, ದಾಖಲೀಕರಣ ಮತ್ತು ಪ್ರಕಟಣೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಈ ಶೈಕ್ಷಣಿಕ ಪ್ರಯತ್ನದಲ್ಲಿ ದೇಶದ ವಿವಿಧ ಭಾಗಗಳ ವಿದ್ವಾಂಸರು, ಸಂಶೋಧಕರು, ಸಾಹಿತಿಗಳು ಮತ್ತು ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸುವಂತೆ ಸಂಘಟಕರು ಆಹ್ವಾನಿಸಿದ್ದಾರೆ.
