ನಾಟ್ಯಕ್ಷ–2026’ ಸಾಂಸ್ಕೃತಿಕ ಸಂಗಮ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ
ನೃತ್ಯ ವಿದ್ಯಾ ನಿಲಯ ಟ್ರಸ್ಟ್ (ರಿ.) ದಾವಣಗೆರೆ ಹಾಗೂ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನೃತ್ಯ ವಿದ್ಯಾ ನಿಲಯ ಟ್ರಸ್ಟ್ನ 5ನೇ ವಾರ್ಷಿಕೋತ್ಸವದ ಅಂಗವಾಗಿ ‘ನಾಟ್ಯಕ್ಷ–2026’ ಸಾಂಸ್ಕೃತಿಕ ಸಮಾರಂಭವನ್ನು ಅಕ್ಟೋಬರ್ 11ರಂದು ಭಾನುವಾರ ಅಪರಾಹ್ನ 3 ಗಂಟೆಗೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನೃತ್ಯ ಗುರು ವಿದುಷಿ ರಕ್ಷಾ ರಾಜಶೇಖರ ಸಕ್ಕಟ್ಟು ಹಾಗೂ ಅಧ್ಯಕ್ಷ ರಾಜಶೇಖರ ಸಕ್ಕಟ್ಟು ತಿಳಿಸಿದ್ದಾರೆ.
ಸಾಧಕರಿಗೆ ಸನ್ಮಾನ ಹಾಗೂ ನೃತ್ಯ, ಯಕ್ಷಗಾನ, ಸಂಸ್ಕೃತಿಯ ವೈವಿಧ್ಯಮಯ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ‘ನಾಟ್ಯಕ್ಷ–2026’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ವಹಿಸುವರು. ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಮಾಸ್ಟರ್ ಅರ್ಜುನ್ (ಅರ್ಜುನ್ ಅರುಣ್), ಬೆಂಗಳೂರು, ಖ್ಯಾತ ವಿದ್ವಾಂಸ ಹಾಗೂ ವಾಗ್ಮಿ ಪವನ್ ಕಿರಣಕೆರೆ, ಚಳ್ಳಕೆರೆಯ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯು.ಎಸ್.ವಿಷ್ಣುಮೂರ್ತಿ ರಾವ್, ಯಕ್ಷರಂಗ ದಾವಣಗೆರೆ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ಮಾಗನೂರು ಬಸಪ್ಪ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಬಂಗೇರ, ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಹಾಗೂ ನೃತ್ಯ ವಿದ್ಯಾ ನಿಲಯ ಟ್ರಸ್ಟ್ನ ಗೌರವಾಧ್ಯಕ್ಷ ಶಂಕ್ರಯ್ಯ ವಾಡಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪ್ರಧಾನ: ‘ನಾಟ್ಯಕ್ಷ–2026’ ಸಾಂಸ್ಕೃತಿಕ ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕೆ.ರಾಘವೇಂದ್ರ ನಾಯರಿ ಅವರಿಗೆ ‘ಯಕ್ಷ ಲೋಕದ ಮಾಸದ ಬಣ್ಣ–100 ಪ್ರಶಸ್ತಿ’ ಹಾಗೂ ಚಳ್ಳಕೆರೆಯ ನೃತ್ಯ ಗುರು ಸುಧಾಮೂರ್ತಿ ಅವರಿಗೆ ‘ನಾಟ್ಯ ಕಲಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಹಾಗೆಯೇ ಮುಂಬೈ ನೃತ್ಯ ವಿದ್ಯಾ ನಿಲಯದ ವಿದುಷಿ ಶೈಲಜಾ ಮಧುಸೂದನ್ ಅವರಿಗೆ ವಿಶೇಷ ಗುರು ವಂದನೆ ಸಲ್ಲಿಸಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ವಿದುಷಿ ರಕ್ಷಾ ರಾಜಶೇಖರ್ ಸಕ್ಕಟ್ಟು ಅವರ ಶಿಷ್ಯವೃಂದದಿAದ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯಕ್ಷಗಾನ ಹಾಗೂ ವಿಶೇಷ ನೃತ್ಯ ಪ್ರದರ್ಶನ ನಡೆಯಲಿದೆ.

