ಉಜಿರೆಯಲ್ಲಿ ಸೆ. 5ರಂದು ‘ನೆರವಿನ-ನೆರಳು’ ಕಾರ್ಯಕ್ರಮ : ದಿವ್ಯಾಂಗರಿಗೆ ವೈದ್ಯಕೀಯ ಕಿಟ್, ಸಾಧನ ಸಲಕರಣೆ ವಿತರಣೆ

0
11

ಬೆಳ್ತಂಗಡಿ : ವಂದೇ ಮಾತರಂ ನೂರೈವತ್ತರ ವರ್ಷಾಚರಣೆಯ ದಿವ್ಯ ಪ್ರೇರಣೆಯೊಂದಿಗೆ ಸೇವಾಭಾರತಿ (ರಿ.) ಕನ್ಯಾಡಿ-ಸೇವಾಧಾಮ, ಬೆಳ್ತಂಗಡಿ ಹಾಗೂ ಶ್ರೀದೇವಿ ಸೇವಾ ಪ್ರತಿಷ್ಠಾನ, ಪುಷ್ಪಗಿರಿ, ಉರುವಾಲು, ಬೆಳ್ತಂಗಡಿ ಇವರ ಸಹಯೋಗದಲ್ಲಿ ‘ನೆರವಿನ-ನೆರಳು’ ಕಾರ್ಯಕ್ರಮ ಸೆಪ್ಟೆಂಬರ್ 5ರಂದು ಉಜಿರೆಯಲ್ಲಿ ನಡೆಯಲಿದೆ.

ದಿ. ಶ್ರೀದೇವಿಯವರ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ವೈದ್ಯಕೀಯ ಕಿಟ್ ಹಾಗೂ ಅಗತ್ಯ ಸಾಧನ ಸಲಕರಣೆಗಳ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿದೆ.

ಸೆಪ್ಟೆಂಬರ್ 5ರಂದು ಶನಿವಾರ ಪೂರ್ವಾಹ್ನ 10.30ಕ್ಕೆ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸೇವಾಭಾರತಿ (ರಿ.) ಕನ್ಯಾಡಿ-ಸೇವಾಧಾಮದ ಅಧ್ಯಕ್ಷ ಕೆ. ವಿನಾಯಕ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ದಕ್ಷಿಣ ಕರ್ನಾಟಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ ಕುಟುಂಬ ಪ್ರಬೋಧನ್ ಪ್ರಮುಖ ಸುಬ್ರಾಯ ನಂದೋಡಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ನಿಕಟಪೂರ್ವ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶ್ರೀ ಜನಾರ್ದನ ದೇವಸ್ಥಾನ, ಉಜಿರೆಯ ಅನುವಂಶಿಕ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಿ ಗೌಡ ಎ., ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕುಶಾಲಪ್ಪ ಗೌಡ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಬಿಜೆಪಿ ಬೆಳ್ತಂಗಡಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಈಶ್ವರ್ ಬೈರ ಹಾಗೂ ಎಸ್‌ಟಿ ಮೋರ್ಚಾ ಅಧ್ಯಕ್ಷ ರಾಜೇಶ್ ಎಂ.ಕೆ. ಸೇರಿದಂತೆ ಗಣ್ಯರು ಉಪಸ್ಥಿತರಿರುವರು.

ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿವ್ಯಾಂಗರಿಗೆ ನೆರವು ನೀಡುವ ಈ ಸೇವಾ ಕಾರ್ಯಕ್ಕೆ ಬೆಂಬಲ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಸೇವಾಭಾರತಿ (ರಿ.) ಕನ್ಯಾಡಿ-ಸೇವಾಧಾಮದ ಕಾರ್ಯದರ್ಶಿ ವಿಷ್ಣುಪ್ರಸಾದ್ ತೆಂಕಿಲ್ಲಾಯ ಹಾಗೂ ಟ್ರಸ್ಟಿಗಳು, ಸದಸ್ಯರು, ಪದಾಧಿಕಾರಿಗಳು, ಪೋಷಕರು ಮತ್ತು ಸಿಬ್ಬಂದಿ ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದಾರೆ. ಶ್ರೀದೇವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಿರಣ್‌ಚಂದ್ರ ಡಿ. ಪುಷ್ಪಗಿರಿ ಅವರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.