ಅಂಗಾಂಗ ದಾನದಿಂದ ನಾಲ್ವರಿಗೆ ಹೊಸ ಜೀವ : ಸಾವಿನಲ್ಲೂ ಸಾರ್ಥಕತೆ ಮೆರೆದ ಪ್ರಕಾಶ್ ಆಚಾರ್ಯ‌

0
32

ಮಂಗಳೂರು : ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದ ನಡುವೆಯೂ ಕುಟುಂಬಸ್ಥರು ತೆಗೆದುಕೊಂಡ ದಿಟ್ಟ ಹಾಗೂ ನಿಸ್ವಾರ್ಥ ನಿರ್ಧಾರದಿಂದಾಗಿ ನಾಲ್ವರು ರೋಗಿಗಳಿಗೆ ಹೊಸ ಜೀವನದ ನಿರೀಕ್ಷೆ ಮೂಡಿದೆ. ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ದಾನ ಮಾಡಲಾಗಿದ್ದು, ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಉಳ್ಳಾಲ ತಾಲೂಕಿನ ಕೋಟೇಕಾರ್ ಸಮೀಪದ ಬೀರಿ, ಮದೂರು ಸೈಟ್ ನಿವಾಸಿ 50 ವರ್ಷದ ಪ್ರಕಾಶ್ ಆಚಾರ್ಯ ಅವರು ಅಂಗಾಂಗ ದಾನ ಮಾಡಿದ ಮಹಾದಾನಿಯಾಗಿದ್ದಾರೆ. ಸೆಪ್ಟೆಂಬರ್ 14ರಂದು ಮನೆಯ ಮುಂಭಾಗದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 17ರಂದು ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿರುವುದನ್ನು ವೈದ್ಯಕೀಯ ಸಮಿತಿ ದೃಢಪಡಿಸಿತು.

ಈ ಸಂದರ್ಭದಲ್ಲಿ ಕುಟುಂಬಸ್ಥರು ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಮಾನವೀಯತೆ ಮೆರೆದರು. ಕುಟುಂಬದ ಒಪ್ಪಿಗೆಯ ಮೇರೆಗೆ ಸೆಪ್ಟೆಂಬರ್ 19ರಂದು ‘ಜೀವನ್ ಸಾರ್ಥಕತೆ’ ಮಾರ್ಗದರ್ಶನದಲ್ಲಿ ಅಂಗಾಂಗ ಸಂಗ್ರಹ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಕೆಎಂಸಿ ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ತಂಡವು ಪ್ರಕಾಶ್ ಆಚಾರ್ಯ ಅವರ ಎರಡು ಕಿಡ್ನಿಗಳನ್ನು ಸಂಗ್ರಹಿಸಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಇಬ್ಬರು ರೋಗಿಗಳಿಗೆ ಅವುಗಳನ್ನು ಕಸಿ ಮಾಡಲು ಬಳಸಲಾಗುತ್ತದೆ. ಇದೇ ವೇಳೆ ಕೆಎಂಸಿ ಅತ್ತಾವರದ ವೈದ್ಯಕೀಯ ತಂಡವು ಎರಡು ಕಾರ್ನಿಯಾಗಳನ್ನು (ಕಣ್ಣಿನ ಪರೆ) ಸಂಗ್ರಹಿಸಿದೆ. ಇದರಿಂದ ದೃಷ್ಟಿಯ ನಿರೀಕ್ಷೆಯಲ್ಲಿರುವ ಇನ್ನಿಬ್ಬರಿಗೆ ಹೊಸ ಬೆಳಕು ದೊರೆಯುವ ಸಾಧ್ಯತೆಯಿದೆ.

ಅಂಗಾಂಗ ಸಂಗ್ರಹದಂತಹ ಸಂಕೀರ್ಣ ವೈದ್ಯಕೀಯ ಪ್ರಕ್ರಿಯೆಯನ್ನು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್. ಅವರ ನೇತೃತ್ವದಲ್ಲಿ ನರಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ವಿಧಿವಿಜ್ಞಾನ ತಜ್ಞರ ತಂಡ ಹಾಗೂ ರಾಜ್ಯ ಅಂಗಾಂಗ ಕಸಿ ಸಂಸ್ಥೆ (SOTTO)ಯ ಸಮನ್ವಯದೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಪ್ರಕಾಶ್ ಆಚಾರ್ಯ ಅವರ ಕುಟುಂಬದ ಈ ಮಾನವೀಯ ನಿರ್ಧಾರದಿಂದ ನಾಲ್ಕು ಕುಟುಂಬಗಳಲ್ಲಿ ಹೊಸ ಆಶಾಕಿರಣ ಮೂಡಿದೆ. ದುಃಖದ ಸಂದರ್ಭದಲ್ಲಿಯೂ ಮತ್ತೊಬ್ಬರ ಬದುಕಿಗೆ ಬೆಳಕಾಗುವ ನಿರ್ಧಾರ ಕೈಗೊಂಡ ಕುಟುಂಬದ ಕಾರ್ಯವನ್ನು ವೆನ್ಲಾಕ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಶ್ಲಾಘಿಸಿದ್ದಾರೆ.

ಅಂಗಾಂಗ ದಾನವು ಒಬ್ಬ ವ್ಯಕ್ತಿಯ ಬದುಕಿನ ಅಂತ್ಯದ ಬಳಿಕವೂ ಮತ್ತೊಬ್ಬರ ಬದುಕನ್ನು ಮುಂದುವರಿಸುವ ಅಮೂಲ್ಯ ಕೊಡುಗೆಯಾಗಿದೆ. ಪ್ರಕಾಶ್ ಆಚಾರ್ಯ ಅವರ ಕುಟುಂಬ ತೋರಿದ ಮಾನವೀಯತೆ ಮತ್ತು ನಿಸ್ವಾರ್ಥ ಸೇವೆಗೆ ವೆನ್ಲಾಕ್ ಆಸ್ಪತ್ರೆಯ ಪರವಾಗಿ ಡಾ. ಶಿವಪ್ರಕಾಶ್ ಅವರು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.