ಎಂ.ಐ.ಸಿಯಲ್ಲಿ ವಿವಿಧ ರಾಜ್ಯದ ವಿದ್ಯಾರ್ಥಿಗಳಿಂದ ರಾಜ್ಯೋತ್ಸವ ಸಂಭ್ರಮಾಚರಣೆ

0
4

ಉಡುಪಿ : ಮಣಿಪಾಲ ಮಾಹೆಯ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ದೀಪಪ್ರಜ್ವಲನೆ ಮಾಡುವ ಮೂಲಕ ಎಂ.ಐ.ಸಿ ಯ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಸಂಜಯ್ ಉದ್ಘಾಟಿಸಿದರು. ಎಂ.ಐ.ಸಿ ನಿರ್ದೇಶಕ ಕರಾದ ಡಾ.ಶುಭಾ ಹೆಚ್.ಎಸ್ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ವಿವಿಧ ರಾಜ್ಯಗಳ ವಿದ್ಯಾರ್ಥಿಗಳೇ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯನ್ನು ಬಿಂಬಿಸುವ ರಂಗೋಲಿ ಕಣ್ಮನ ಸೆಳೆಯಿತು. ವಿದ್ಯಾರ್ಥಿ ನಿರೂಪಕರಾದ ದೇವೇಂದ್ರ ಮತ್ತು ವಿದ್ಯಾರ್ಥಿ ನಿರೂಪಕಿ ಸ್ವಸ್ತಿ ಕರ್ನಾಟಕ ರಾಜ್ಯದ ಭಾಷೆ,ಸಂಸ್ಕೃತಿ ಹಾಗೂ ರಾಜ್ಯೋತ್ಸವದ ಪ್ರಾಮುಖ್ಯತೆಯ ಕುರಿತು ವಿವರಿಸಿದರು. ಕನ್ನಡ ಭಾಷೆ, ನಾಡು, ನುಡಿ ಮತ್ತು ಸಂಸ್ಕೃತಿಯ ಸಂರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಯುವಜನತೆ ಹೆಚ್ಚಿನ ಆಸಕ್ತಿ ವಹಿಸಬೇಕು. ಕನ್ನಡ ಭಾಷೆಯನ್ನು ದೈನಂದಿನ ಜೀವನದಲ್ಲಿ ಹೆಚ್ಚು ಬಳಸುವ ಮೂಲಕ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕು.

ಕನ್ನಡ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಗೀತೆಗಳು,ಯಕ್ಷಗಾನ, ಭರತನಾಟ್ಯ,ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿತ್ಯಾ ಪ್ರಾರ್ಥಿಸಿದರು. ಅಥರ್ವ ಮತ್ತು ಬಳಗದವರು ವಿದ್ಯಾರ್ಥಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.