ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಯೋಜನೆಯ ದುರ್ಬಳಕೆ ತಡೆದು ಅರ್ಹ ಫಲಾನುಭವಿಗಳಿಗೆ ಮಾತ್ರ ಹಣ ತಲುಪಿಸುವ ಉದ್ದೇಶದಿಂದ ಇನ್ಮುಂದೆ ‘ಒನ್-ಟೈಮ್ ಬಯೋಮೆಟ್ರಿಕ್’ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ.
ಈ ಹೊಸ ನಿಯಮದ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಬಯೋಮೆಟ್ರಿಕ್ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯೊಂದಿಗೆ ಮರು-ನವೀಕರಣ ಮಾಡಿಸಿಕೊಳ್ಳಬೇಕು. ನವೀಕರಣ ಮಾಡದಿದ್ದರೆ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗುವುದಿಲ್ಲ ಎಂದು ತಿಳಿದುಬಂದಿದೆ. ಸರ್ಕಾರ ಶೀಘ್ರದಲ್ಲೇ ಈ ಕುರಿತು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ Lakshmi Hebbalkar ಮಾಹಿತಿ ನೀಡಿದ್ದು, ಲಕ್ಷಾಂತರ ಫಲಾನುಭವಿಗಳ ಪೈಕಿ ಮೃತಪಟ್ಟವರ ಖಾತೆಗೂ ಹಣ ಜಮೆಯಾಗುತ್ತಿರುವುದು, ಆದಾಯ ತೆರಿಗೆ ಪಾವತಿದಾರರೂ ಯೋಜನೆ ಲಾಭ ಪಡೆಯುತ್ತಿರುವುದು ಹಾಗೂ ಕೆಲವರ ಮೊಬೈಲ್ ಸಂಖ್ಯೆ ಬದಲಾಗಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ಈಗಾಗಲೇ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸುವವರ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದ್ದು, ಇಂತಹವರಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸ್ಥಗಿತಗೊಳ್ಳಲಿದೆ.
ನವೀಕರಣ ಹೇಗೆ?
ಫಲಾನುಭವಿಗಳು ತಮ್ಮ ಹತ್ತಿರದ Bangalore One ಅಥವಾ Karnataka One ಕೇಂದ್ರಗಳಿಗೆ ಭೇಟಿ ನೀಡಿ:
- ಬಯೋಮೆಟ್ರಿಕ್ ಪರಿಶೀಲನೆ
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನೋಂದಣಿ
- ಖಾತೆ ಮರು-ನವೀಕರಣ
ಮಾಡಿಸಿಕೊಳ್ಳಬೇಕು.
ನವೀಕರಣ ಮಾಡದಿದ್ದರೆ ಏನಾಗುತ್ತದೆ?
ಸರ್ಕಾರ ನೇರವಾಗಿ ಯಾರ ಹೆಸರನ್ನೂ ತಕ್ಷಣ ಡಿಲೀಟ್ ಮಾಡುವುದಿಲ್ಲ. ಆದರೆ ‘ಒನ್-ಟೈಮ್ ಬಯೋಮೆಟ್ರಿಕ್’ ಪೂರ್ಣಗೊಳಿಸದ ಖಾತೆಗಳು ಸ್ವಯಂಚಾಲಿತವಾಗಿ ರದ್ದಾಗುವ ಸಾಧ್ಯತೆ ಇದೆ. ಒಮ್ಮೆ ಬಯೋಮೆಟ್ರಿಕ್ ನೀಡಿದ ಬಳಿಕ ಹಣ ಎಂದಿನಂತೆ ಖಾತೆಗೆ ಜಮೆಯಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

