ಜಿಂಕೆ ನುಂಗಿ ಒದ್ದಾಡುತ್ತಿದ್ದ ಬೃಹತ್ ಹೆಬ್ಬಾವು..!!

0
197

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಬಳಿ ಭಾರೀ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬೆಂಗಳೂರು ಜಲಮಂಡಳಿಯ (BWSSB) ಮುಖ್ಯ ನೀರು ಸರಬರಾಜು ಪೈಪ್‌ಲೈನ್ ಸಮೀಪ ಸುಮಾರು 10 ಅಡಿ ಉದ್ದ ಹಾಗೂ 30 ಕೆಜಿಗೂ ಅಧಿಕ ತೂಕವಿದ್ದ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದೆ. ಈ ಹೆಬ್ಬಾವು ದೊಡ್ಡ ಜಿಂಕೆಯೊಂದನ್ನು ಸಂಪೂರ್ಣವಾಗಿ ನುಂಗಿದ್ದರಿಂದ, ಭಾರದಿಂದ ಮುಂದೆ ಚಲಿಸಲು ಸಾಧ್ಯವಾಗದೆ ಒಂದೇ ಕಡೆ ಮಲಗಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ.

ಹೆಬ್ಬಾವನ್ನು ಕಂಡ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ತಜ್ಞರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಯಾವುದೇ ಅಪಾಯವಾಗದಂತೆ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.

ಬಳಿಕ ಆ ದೈತ್ಯ ಹೆಬ್ಬಾವನ್ನು ಜನವಸತಿ ಪ್ರದೇಶದಿಂದ ದೂರವಿರುವ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಗಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಇದೇ ವೇಳೆ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಸಮ್ ಗ್ರಾಮದಲ್ಲಿಯೂ ಇತ್ತೀಚೆಗೆ ಇಂತಹದ್ದೇ ಘಟನೆ ನಡೆದಿದ್ದು, ಬೃಹತ್ ಹೆಬ್ಬಾವೊಂದು ಕೋತಿಯನ್ನು ನುಂಗಿದ ಘಟನೆ ವರದಿಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರು ಹೆಬ್ಬಾವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದರು.

LEAVE A REPLY

Please enter your comment!
Please enter your name here