
ಬೆಂಗಳೂರು : ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ನಿಯಂತ್ರಣದ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಮುಕ್ತವಾಗಿ ಆಹಾರ ನೀಡುವುದನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಆರೋಗ್ಯ ತಜ್ಞರ ಪ್ರಕಾರ, ಪಾರಿವಾಳಗಳ ಹಿಕ್ಕಿ (ಎಕ್ಕೆ) ಮತ್ತು ಈಕಳಗಳ ಸಂಪರ್ಕದಿಂದ ‘ಹೈಪರ್ ಸೆನ್ಸಿಟಿವಿಟಿ ನ್ಯೂಮೋನಿಟಿಸ್’ ಸೇರಿದಂತೆ ಗಂಭೀರ ಶ್ವಾಸಕೋಶದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟದ ಸಮಸ್ಯೆ ಇರುವವರಿಗೆ ಹೆಚ್ಚಿನ ಅಪಾಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಸರ್ಕಾರದ ಆದೇಶದಂತೆ, ರಸ್ತೆ, ಕಾಲುದಾರಿ (ಫುಟ್‌ಪಾತ್) ಹಾಗೂ ಇತರ ಸಾರ್ವಜನಿಕ ಅಥವಾ ಖಾಸಗಿ ಬಹಿರಂಗ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ. ಗುರುತಿಸಲಾದ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಬೆಳಗ್ಗೆ 7.00 ರಿಂದ 9.00 ಗಂಟೆಯವರೆಗೆ ಆಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.
ಸ್ಥಳೀಯ ಆಡಳಿತದಿಂದ ಲಿಖಿತ ಅನುಮತಿ ಪಡೆದ ಸ್ವಯಂಸೇವಾ ಸಂಸ್ಥೆಗಳು (NGO) ಅಥವಾ ಚಾರಿಟೇಬಲ್ ಟ್ರಸ್ಟ್‌ಗಳು ಮಾತ್ರ ಆಹಾರ ವಿತರಣಾ ಕೇಂದ್ರಗಳ ನಿರ್ವಹಣೆ ಮತ್ತು ಸ್ವಚ್ಛತೆಯ ಜವಾಬ್ದಾರಿ ವಹಿಸಿದಲ್ಲಿ ಆಹಾರ ನೀಡಬಹುದು. ಅಲ್ಲದೆ, ಬೇಯಿಸಿದ ಆಹಾರ, ಬ್ರೆಡ್ ಅಥವಾ ಇತರ ಆಹಾರ ತ್ಯಾಜ್ಯಗಳನ್ನು ಬಳಸುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಅನುಮೋದಿತ ಧಾನ್ಯಗಳನ್ನು ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ.
ನಿವಾಸಿಗಳ ಸಂಘಗಳು ಹಾಗೂ ಸಾರ್ವಜನಿಕರು ತಮ್ಮ ಮನೆಗಳ ಟೆರೇಸ್, ಬಾಲ್ಕನಿ ಮತ್ತು ಕಟ್ಟಡಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಬಾರದು ಎಂದು ಸರ್ಕಾರ ಸೂಚಿಸಿದೆ. ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಪಾರಿವಾಳ ಆಹಾರ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ಇರುವುದಿಲ್ಲ.
ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಫಲಕಗಳು ಮತ್ತು ಡಿಜಿಟಲ್ ಸಂದೇಶಗಳನ್ನು ಪ್ರದರ್ಶಿಸಲು ಸೂಚಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಅನುಮತಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಂಬಂಧಿತ ಆಯುಕ್ತರಿಗೆ ನೀಡಲಾಗಿದೆ.
