ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಭ್ರೂಣಶಾಸ್ತ್ರಜ್ಞರ ದಿನ

0
11

“ ಐವಿಎಫ್ ಪ್ರಯೋಗಾಲಯದಲ್ಲಿ ಜೀವನದ ಅದ್ಭುತವನ್ನು ಅನುಭವಿಸಿ” — ಸಾರ್ವಜನಿಕರಿಗೆ ಆಹ್ವಾನ

ಮಣಿಪಾಲ : ಆಧುನಿಕ ಸಂತಾನೋತ್ಪತ್ತಿ ವಿಜ್ಞಾನದ ಅದ್ಭುತವನ್ನು ಸಾಮಾನ್ಯ ಜನರ ಸಮೀಪಕ್ಕೆ ತರುವ ಮನಸೆಳೆಯುವ ಹೆಜ್ಜೆಯಲ್ಲಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು, ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ 2026ರ ಜುಲೈ 25ರ ಶನಿವಾರ ವಿಶ್ವ ಭ್ರೂಣಶಾಸ್ತ್ರಜ್ಞರ ದಿನವನ್ನು ಆಚರಿಸಲಿದೆ. “ಐವಿಎಫ್ ಪ್ರಯೋಗಾಲಯದಲ್ಲಿ ಜೀವನದ ಅದ್ಭುತವನ್ನು ಅನುಭವಿಸಿ” ಎಂಬ ಧ್ಯೇಯದಡಿಯಲ್ಲಿ ನಡೆಯಲಿರುವ ಈ ಜಾಗೃತಿ ಕಾರ್ಯಕ್ರಮವು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ, ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಆವರಣದಲ್ಲಿರುವ ಮಣಿಪಾಲ್ ಸೆಂಟರ್ ಫಾರ್ ಎಂಬ್ರಿಯಾಲಜಿ ಅಂಡ್ ರಿಪ್ರೊಡಕ್ಟಿವ್ ಸೈನ್ಸ್ (MARC) ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವು ಎಲ್ಲರಿಗೂ ಮುಕ್ತವಾಗಿದ್ದು, ಉಚಿತ ನೋಂದಣಿಯ ವ್ಯವಸ್ಥೆಯಿದೆ. ಫಲವತ್ತತೆ, ಭ್ರೂಣಶಾಸ್ತ್ರ ಮತ್ತು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಇದು ಹೊಂದಿದೆ. ಮಗುವಿನ ಕನಸಿನಲ್ಲಿರುವ ದಂಪತಿಗಳು, ಮಹತ್ವಾಕಾಂಕ್ಷಿ ಭ್ರೂಣಶಾಸ್ತ್ರಜ್ಞರು ಮತ್ತು ಸಾಮಾನ್ಯ ಜನರನ್ನು ಒಂದೆಡೆ ಸೇರಿಸಿ, ಪೋಷಕತ್ವದ ಕನಸನ್ನು ಸುಂದರ ವಾಸ್ತವವನ್ನಾಗಿ ಪರಿವರ್ತಿಸುವ ಸಮರ್ಪಣೆಯ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ.

ಕಾರ್ಯಕ್ರಮವನ್ನು 2026ರ ಜುಲೈ 25ರ ಶನಿವಾರದಂದು ಬೆಳಗ್ಗೆ 10 ಗಂಟೆಗೆ, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಣಿಪಾಲದ ಡೀನ್ ಡಾ. ಅನಿಲ್ ಭಟ್ ಅವರು, ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು

ಫರ್ಟಿಲಿಟಿ ಕನೆಕ್ಟ್: ಕುಟುಂಬವನ್ನು ಆರಂಭಿಸಲು ಅಥವಾ ಬೆಳೆಸಲು ಯೋಜಿಸುತ್ತಿರುವ ದಂಪತಿಗಳು ಆಸ್ಪತ್ರೆಯ ಫಲವತ್ತತೆ ತಜ್ಞರೊಂದಿಗೆ ಉಚಿತ ವೈಯಕ್ತಿಕ ಸಮಾಲೋಚನೆ ಪಡೆಯಬಹುದು. ಅವರು ತಜ್ಞ ಮಾರ್ಗದರ್ಶನ ಪಡೆಯಬಹುದು, ತಮ್ಮ ಅನುಮಾನಗಳನ್ನು ಮುಕ್ತವಾಗಿ ಚರ್ಚಿಸಬಹುದು ಮತ್ತು ಇತ್ತೀಚಿನ ಫಲವತ್ತತೆ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ಪಡೆಯಬಹುದು.

ಎಂಬ್ರಿಯಾಲಜಿ ಓಪನ್ ಹೌಸ್: ಕ್ಲಿನಿಕಲ್ ಎಂಬ್ರಿಯಾಲಜಿಯನ್ನು (ಭ್ರೂಣಶಾಸ್ತ್ರಜ್ಞ) ವೃತ್ತಿಯನ್ನಾಗಿ ಆಯ್ಕೆಮಾಡಿಕೊಳ್ಳಲು ಆಸಕ್ತಿ ಹೊಂದಿರುವವರು ಅತ್ಯಾಧುನಿಕ ಐವಿಎಫ್ ಪ್ರಯೋಗಾಲಯಕ್ಕೆ ಭೇಟಿ ನೀಡಬಹುದು, ಅನುಭವಿ ಭ್ರೂಣಶಾಸ್ತ್ರಜ್ಞರೊಂದಿಗೆ ಸಂವಾದ ನಡೆಸಬಹುದು, ಆಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಜೀವ ಹೇಗೆ ಸೃಷ್ಟಿಯಾಗುತ್ತದೆ ಎಂಬುದನ್ನು ಕಣ್ಣಾರೆ ನೋಡಬಹುದು ಹಾಗೂ ಆರೋಗ್ಯ ಕ್ಷೇತ್ರದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿನ ವೃತ್ತಿ ಅವಕಾಶಗಳನ್ನು ತಿಳಿಯಬಹುದು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಲಿನಿಕಲ್ ಎಂಬ್ರಿಯಾಲಜಿ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥರು ಹಾಗೂ ಫಲವತ್ತತೆ ಸಂರಕ್ಷಣಾ ಕೇಂದ್ರದ ಸಮನ್ವಯಕಾರರಾದ ಪ್ರೊ. ಡಾ. ಸತೀಶ್ ಕುಮಾರ್ ಅಡಿಗ ಅವರು, “ಪ್ರತಿಯೊಂದು ಯಶಸ್ವಿ ಐವಿಎಫ್ ಪ್ರಯಾಣದ ಹಿಂದೆ ಇರುವ ಮೌನ ಕೈಗಳೇ ಭ್ರೂಣಶಾಸ್ತ್ರಜ್ಞರು. ಜೀವನದ ಮೊದಲ ಕ್ಷಣಗಳನ್ನು ಪ್ರಯೋಗಾಲಯದಲ್ಲಿ ಮೌನವಾಗಿ ಪೋಷಿಸುತ್ತಾರೆ. ವಿಶ್ವ ಭ್ರೂಣಶಾಸ್ತ್ರಜ್ಞರ ದಿನದಂದು ನಾವು ಈ ವಿಜ್ಞಾನ, ನಿಖರತೆ ಮತ್ತು ಸಮರ್ಪಣೆಯನ್ನು ಸಾರ್ವಜನಿಕರಿಗೆ ತೆರೆದಿಟ್ಟು, ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡಲು ಬಯಸುತ್ತೇವೆ.”

ಕಾರ್ಯಕ್ರಮದ ವಿವರಗಳು

ಉದ್ಘಾಟನೆ: 2026ರ ಜುಲೈ 25, ಶನಿವಾರ, ಬೆಳಗ್ಗೆ 10 ಗಂಟೆ | ಕಾರ್ಯಕ್ರಮ: ಬೆಳಗ್ಗೆ 11:00 – ಮಧ್ಯಾಹ್ನ 1:00 ಗಂಟೆ

ಸ್ಥಳ: ಮಣಿಪಾಲ ಭ್ರೂಣಶಾಸ್ತ್ರ ಮತ್ತು ಸಂತಾನೋತ್ಪತ್ತಿ ವಿಜ್ಞಾನ ಕೇಂದ್ರ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲ | ಪ್ರವೇಶ: ಸಾರ್ವಜನಿಕರಿಗೆ ಮುಕ್ತ | ಉಚಿತ ನೋಂದಣಿ

ಪ್ರತಿಯೊಂದು ಹೊಸ ಆರಂಭದ ಹಿಂದಿರುವ ವಿಜ್ಞಾನವನ್ನು ಸಂಭ್ರಮಿಸಲು ಹಾಗೂ ಜೀವನವು ನಿಜವಾಗಿಯೂ ರೂಪುಗೊಳ್ಳುವ ಈ ಅದ್ಭುತ ಲೋಕವನ್ನು ಸ್ವತಃ ಅನುಭವಿಸಲು ಆಯೋಜಕರು ಸಾರ್ವಜನಿಕರನ್ನು ಹೃದಯಪೂರ್ವಕವಾಗಿ ಆಹ್ವಾನಿಸಿದ್ದಾರೆ.