ಏಳು ಕೊಲೆ ಪ್ರಕರಣಕ್ಕೆ ಹೊಸ ತಿರುವು : ಟ್ರಿಪ್ ಕಥೆ ಕಟ್ಟಿದ ಆರೋಪಿ!

0
19

ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಹತ್ಯೆಯ ಬಳಿಕ ಮೃತರ ಮೊಬೈಲ್‌ಗಳಿಗೆ ಬರುತ್ತಿದ್ದ ಕರೆಗಳಿಗೆ ಆರೋಪಿ ಉತ್ತರಿಸುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆ ನಡೆದಿರುವುದು ಬೆಂಗಳೂರಿನ ರಾಜಾಜಿನಗರದಲ್ಲಿ.

ಶಿವಕುಮಾರ್ ಮತ್ತು ದಿವ್ಯ ದಂಪತಿಯ ಪುತ್ರ ಪುನೀತ್ ಹಾಗೂ ಶಂಕರ್ ಮತ್ತು ನಳಿನಿ ದಂಪತಿಯ ಪುತ್ರ ಯತಿನ್ ಮೂಲಕ ಸಂಬಂಧಿಕರ ಕರೆಗಳಿಗೆ ಉತ್ತರ ಕೊಡಿಸಲಾಗಿತ್ತು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ. ಇದೀಗ ಬಾಲಕ ಯತಿನ್ ಸಂಬಂಧಿಕರೊಂದಿಗೆ ಮಾತನಾಡಿರುವ ಆಡಿಯೋ ಬಹಿರಂಗವಾಗಿದ್ದು, ಪ್ರಕರಣದ ಭೀಕರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಪ್ಪ-ಅಮ್ಮ ಟ್ರಿಪ್‌ಗೆ ಹೋಗಿದ್ದಾರೆ ಎಂದ ಬಾಲಕ!

ಬಹಿರಂಗವಾಗಿರುವ ಆಡಿಯೋದಲ್ಲಿ ಸಂಬಂಧಿಕರು ಯತಿನ್‌ನನ್ನು ಸಂಪರ್ಕಿಸಿ ಅಪ್ಪ-ಅಮ್ಮ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ನಳಿನಿ ಅವರೊಂದಿಗೆ ಒಮ್ಮೆಯಾದರೂ ಮಾತನಾಡಿಸು, ಅವರ ತಾಯಿ ತುಂಗಮ್ಮ ತುಂಬಾ ನೊಂದಿದ್ದಾರೆ ಎಂದು ಮನವಿ ಮಾಡಿದ್ದಾರೆ.

ಆದರೆ ಯತಿನ್, ತಾವು ಟ್ರಿಪ್‌ಗೆ ಬಂದಿರುವುದಾಗಿ ಹಾಗೂ ಅಪ್ಪ-ಅಮ್ಮ ಬಸ್‌ನಲ್ಲಿರುವುದರಿಂದ ಮಾತನಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾನೆ. ಅಲ್ಲದೆ, ಟ್ರಿಪ್ ಮುಗಿಸಿ ಮರಳಲು ಮೂರು ತಿಂಗಳು ಬೇಕಾಗುತ್ತದೆ ಎಂದೂ ಹೇಳಿದ್ದಾನೆ. ಬಸ್ ಹತ್ತಲು ಕರೆಯುತ್ತಿದ್ದಾರೆ, ತಾನು ಹೋಗಬೇಕು ಎಂದು ಮಾತನಾಡಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಪುನೀತ್ ಕೂಡ ನಮ್ಮ ಜೊತೆಯಲ್ಲಿದ್ದಾನೆ ಎಂದಿದ್ದ ಯತಿನ್

ಮಾತುಕತೆಯ ವೇಳೆ ಸಂಬಂಧಿಕರು ಪುನೀತ್ ಎಲ್ಲಿದ್ದಾನೆ ಎಂದು ಪ್ರಶ್ನಿಸಿದಾಗ, ಪುನೀತ್ ಕೂಡ ನಮ್ಮ ಜೊತೆಯಲ್ಲಿದ್ದಾನೆ, ಎಲ್ಲರೂ ಬಸ್‌ನಲ್ಲಿದ್ದೇವೆ ಎಂದು ಯತಿನ್ ಹೇಳಿದ್ದಾನೆ. ಕುಟುಂಬದ ಸದಸ್ಯರ ಹತ್ಯೆಯ ವಿಚಾರ ಹೊರಬರದಂತೆ ಆರೋಪಿ ಟ್ರಿಪ್ ಮತ್ತು ಬಸ್ ಪ್ರಯಾಣದ ಕಥೆಯನ್ನು ಬಾಲಕನಿಂದ ಹೇಳಿಸಿದ್ದಾನೆ ಎನ್ನಲಾಗಿದೆ.

ಪೊಲೀಸರ ವಶಕ್ಕೆ ಆಡಿಯೋ
ಹತ್ಯೆಯ ಬಳಿಕ ಮೃತರ ಮೊಬೈಲ್‌ಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ ಆರೋಪಿ, ಸಂಬಂಧಿಕರ ಕರೆಗಳಿಗೆ ತಾನೇ ಉತ್ತರಿಸುವುದರ ಜೊತೆಗೆ ಕೆಲವೊಮ್ಮೆ ಬಾಲಕರಿಂದಲೂ ಮಾತನಾಡಿಸುತ್ತಿದ್ದ ಎನ್ನಲಾಗಿದೆ. ಬಳಿಕ ಪುನೀತ್‌ನನ್ನೂ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಸದ್ಯ ಸಂಬಂಧಿಕರು ಯತಿನ್ ಮಾತನಾಡಿರುವ ಆಡಿಯೋಗಳನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಅವುಗಳ ಸತ್ಯಾಸತ್ಯತೆ ಹಾಗೂ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಒಂದೊಂದಾಗಿ ಹೊರಬರುತ್ತಿರುವ ಸಂಗತಿಗಳು ಸಾರ್ವಜನಿಕರಲ್ಲಿ ತೀವ್ರ ಆಘಾತ ಮೂಡಿಸಿದ್ದು, ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.