ಹಾವಂಜೆ: ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ನಿರಂತರ ಒಂದು ವರ್ಷದ ಹೋರಾಟದ ಫಲವಾಗಿ ಹಾವಂಜೆ ಗ್ರಾಮದ ನಾಲ್ಕನೇ ವಾರ್ಡ್ನ ಕೀಳಂಜೆ ನೆರೆ ಕಾಲನಿ ಪ್ರದೇಶದಲ್ಲಿ ಸುಮಾರು 15ರಿಂದ 20 ವರ್ಷಗಳಷ್ಟು ಹಳೆಯದಾದ ಎರಡು ಮೆಸ್ಕಾಂ ವಿದ್ಯುತ್ ಕಂಬಗಳನ್ನು ಬದಲಾಯಿಸಿ ನೂತನ ಕಂಬಗಳನ್ನು ಅಳವಡಿಸಲಾಗಿದೆ.
ಕೃಷ್ಣ ಆಚಾರ್ಯ ಹಾಗೂ ಆನಂದ ಆಚಾರ್ಯ ಅವರ ಮನೆಗಳಿಗೆ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದ ಹಳೆಯ ಕಂಬಗಳಿಂದ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು. ಇದನ್ನು ಗಮನಿಸಿದ ಸತೀಶ್ ಪೂಜಾರಿ ಅವರು ಮೆಸ್ಕಾಂ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸಿ, ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡುವ ಮೂಲಕ ಹೊಸ ವಿದ್ಯುತ್ ಕಂಬಗಳ ಅಳವಡಿಕೆಗೆ ಯಶಸ್ವಿಯಾಗಿದ್ದಾರೆ.
ಇದಲ್ಲದೆ, ಕೀಳಂಜೆ ಹರಿಹರ ತೀರ್ಥ ದೇವಸ್ಥಾನದ ಸಮೀಪವಿದ್ದ ಸುಮಾರು 23 ವರ್ಷಗಳಷ್ಟು ಹಳೆಯದಾದ ವಿದ್ಯುತ್ ಟ್ರಾನ್ಸ್ಫಾರ್ಮರ್ (ಟಿ.ಸಿ.) ಅನ್ನು ಕೂಡ ಒಂದು ವರ್ಷದ ಸತತ ಪ್ರಯತ್ನದ ಮೂಲಕ ಬದಲಾಯಿಸಿ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಟ್ರಾನ್ಸ್ಫಾರ್ಮರ್ ಮೂಲಕ ಸುಮಾರು 40 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿತ್ತು.
ಪಂಚಾಯಿತಿ ಸದಸ್ಯರಾಗಿರದಿದ್ದರೂ ನಾಲ್ಕನೇ ವಾರ್ಡ್ನ ಹಲವು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸತೀಶ್ ಪೂಜಾರಿ ಅವರು ಕಳೆದ ಸುಮಾರು 20 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ಅವರ ಕಾರ್ಯವೈಖರಿ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಮುಖಂಡ ಸತೀಶ್ ಪೂಜಾರಿ ಬಾಣಬೆಟ್ಟು ಅವರು, ಸತೀಶ್ ಪೂಜಾರಿ ಕೀಳಂಜೆ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗುತ್ತಾ ಬಂದಿದ್ದಾರೆ. ಹಳೆಯ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ನಿಂದ ಸಾರ್ವಜನಿಕರು ಎದುರಿಸುತ್ತಿದ್ದ ತೊಂದರೆಗಳನ್ನು ಮನಗಂಡು ನಿರಂತರ ಪ್ರಯತ್ನದ ಮೂಲಕ ಪರಿಹಾರ ಕಂಡುಕೊಟ್ಟಿರುವುದು ಶ್ಲಾಘನೀಯ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅವರು ಮಾಡುತ್ತಿರುವ ಸಮಾಜಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯುತ್ ಕಂಬಗಳ ಬದಲಾವಣೆ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸತೀಶ್ ಪೂಜಾರಿ ಬಾಣಬೆಟ್ಟು, ಕೃಷ್ಣ ಆಚಾರ್ಯ, ಆನಂದ್ ಆಚಾರ್ಯ, ಸಂದೀಪ್ ಪೂಜಾರಿ, ಉಮೇಶ್ ಪೂಜಾರಿ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಉಪಸ್ಥಿತರಿದ್ದರು.
ಸತೀಶ್ ಪೂಜಾರಿ ಕೀಳಂಜೆ ಅವರ ಸಾಮಾಜಿಕ ಕಳಕಳಿ ಹಾಗೂ ನಿರಂತರ ಜನಸೇವೆಯನ್ನು ಕೀಳಂಜೆ ವಾರ್ಡ್ನ ರೈತರು ಮತ್ತು ಸಾರ್ವಜನಿಕರು ಅಭಿನಂದಿಸಿದ್ದು, ಮುಂದಿನ ದಿನಗಳಲ್ಲಿಯೂ ಅವರಿಗೆ ಸಮಾಜಸೇವೆ ಹಾಗೂ ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಅವಕಾಶಗಳು ದೊರೆಯಲಿ ಎಂದು ಹಾರೈಸಿದ್ದಾರೆ.

