ನಿಡ್ವಾಳ ಬಸದಿ, ಪುದುವೆಟ್ಟು: ಪಂಚಕಲ್ಯಾಣ ಮಹೋತ್ಸವ : ಜನ್ಮಾಭಿಷೇಕ ಕಲ್ಯಾಣ

0
2


ಪಂಚಕಲ್ಯಾಣದಿಂದ ಆತ್ಮಕಲ್ಯಾಣ: ಜಿನೇಂದ್ರ ಭಗವಂತನ ಪೂಜೆ, ಅಭಿಷೇಕ ಮಾಡುವುದರಿಂದ ಸಕಲ ಕರ್ಮಗಳ ನಾಶವಾಗಿ ಅನಂತಸುಖ ಪ್ರಾಪ್ತಿಯಾಗುತ್ತದೆ.
ಉಜಿರೆ: ಜಿನೇಂದ್ರ ಭಗವಂತನ ಪೂಜೆ, ಅಭಿಷೇಕವನ್ನು ಶ್ರದ್ಧಾ-ಭಕ್ತಿಯೊಂದಿಗೆ ಮಾಡುವುದರಿಂದ ಸಕಲಕರ್ಮಗಳ ನಾಶವಾಗಿ ಅನಂತಸುಖ ಪ್ರಾಪ್ತಿಯಾಗುತ್ತದೆ ಎಂದು ಪೂಜ್ಯ ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರು ಹೇಳಿದರು.
ಅವರು ಶುಕ್ರವಾರ ಪುದುವೆಟ್ಟು ಗ್ರಾಮದ ನಿಡ್ವಾಳ ಭಗವಾನ್ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ  ತೀರ್ಥಂಕರರ ಜನ್ಮಾಭಿಷೇಕ ಕಲ್ಯಾಣ ಸಂದರ್ಭ ಮಂಗಲ ಪ್ರವಚನ ನೀಡಿದರು.
ಸಾಧು-ಸಂತರ ಪಾದಾರ್ಪಣೆಯಿಂದ ಇಡೀ ಪ್ರದೇಶವೇ ಪವಿತ್ರವಾಗಿ ಪುಣ್ಯ ಭೂಮಿಯಾಗುತ್ತದೆ. ತನ್ಮೂಲಕ ಲೋಕಕಲ್ಯಾಣವಾಗುತ್ತದೆ. ಸ್ವಾಧ್ಯಾಯದಿಂದ ಜನ್ಮ ಸಾರ್ಥಕವಾಗುತ್ತದೆ. ಪವಿತ್ರ ಜಿನವಾಣಿಯನ್ನು ಸ್ವಾಧ್ಯಾಯ ಮಾಡಿ ಚಿಂತನ-ಮಂಥನದೊಂದಿಗೆ ವೃತ-ನಿಯಮಗಳನ್ನು ಧಾರಣೆ ಮಾಡಬೇಕು. ಮಕ್ಕಳೇ ಅಮೂಲ್ಯ ಆಸ್ತಿಯಾಗಿದ್ದು, ಬಾಲ್ಯದಿಂದಲೆ ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಜನವಾಣಿ ಕೆಳುವ ಬದಲು ಜಿನವಾಣಿ ಆಲಿಸಬೇಕು. ಜಿನವಾಣಿ ಕೇಳುವವರು ಜಿನರಾಗುತ್ತಾರೆ. ಪ್ರತಿ ಬಸದಿಯಲ್ಲಿಯೂ ಧರ್ಮಪಾಠಶಾಲೆಯನ್ನು ಪ್ರಾರಂಭಿಸಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಪೂಜ್ಯರು ಸಲಹೆ ನೀಡಿದರು.
ರೇಶ್ಮೆ ಸೀರೆ ತ್ಯಜಿಸಿ: ಒಂದು ರೇಶ್ಮೆ ಸೀರೆ ತಯಾರಿಸುವಾಗ ೫,೫೮೪ ರೇಶ್ಮೆ ಹುಳಗಳ ನಾಶವಾಗುತ್ತದೆ. ಆದುದರಿಂದ ಶ್ರಾವಕಿಯರು (ಮಹಿಳೆಯರು) ರೇಶ್ಮೆ ಸೀರೆ ತ್ಯಜಿಸಬೇಕು ಎಂದು ಅವರು ಹಿತವಚನ ನೀಡಿದರು.
ಜಿನಕಲ್ಯಾಣದ ಸಂದರ್ಭ ಅಷ್ಟವಿಧಾರ್ಚನೆ ಪೂಜೆಯೊಂದಿಗೆ ಜಿನ ಬಾಲಕನಿಗೆ “ಪಾರ್ಶ್ವನಾಥ” ಎಂದು ನಾಮಕರಣ ಮಾಡಿ ಸಿಹಿತಿಂಡಿ ವಿತರಿಸಲಾಯಿತು.
ನಿರೀಕ್ಷಾ ಹೊಸ್ಮಾರು ಅವರು ಸುಶ್ರಾವ್ಯ ಗಾಯನ ಹಾಗೂ ಜೋಗುಳ ಹಾಡು ಜನ್ಮಾಭಿಷೇಕಕ್ಕೆ ವಿಶೇಷ ಮೆರುಗನ್ನು ನೀಡಿತು.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಪ್ರಿಯದರ್ಶಿನಿ, ಸೋನಿಯಾವರ್ಮ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮದ ಕನ್ಯಾಡಿಯ “ರತ್ನತ್ರಯ” ನಿವಾಸಿಗಳಾದ ಹರ್ಷಿಣಿ ಮತ್ತು ರತ್ನವರ್ಮ ಜೈನ್ ದಂಪತಿ, ಮಗಳು ಶೃತಿ ಹಾಗೂ ಕುಟುಂಬಸ್ಥರು ಸೇವಾಕರ್ತೃಗಳಾಗಿ ಸಹಕರಿಸಿದರು.
ನಾಳೆ ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಸೇವಾಕರ್ತೃಗಳಾಗಿ ಭಾಗವಹಿಸುವರು.
ಪಾರ್ಶ್ವನಾಥ ತೀರ್ಥಂಕರರ ಕೇವಲಜ್ಞಾನ ಕಲ್ಯಾಣ, ಶಿಖರಾರೋಹಣ, ಅಪರಾಹ್ನ ಸಮವಸರಣ ಪೂಜೆ, ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ೧೦೦೮ ಕಲಶಗಳಿಂದ ಅಭಿಷೇಕ ನಡೆಯಲಿದೆ.

LEAVE A REPLY

Please enter your comment!
Please enter your name here