ರಾತ್ರಿ ಶಾಲೆಯಲ್ಲಿ ಕಲಿತು ಎಂಬಿಎ, ಸಿಎ ಪದವಿ ಪಡೆದ ಸಾಧಕ ಶ್ರೀನಿವಾಸ ಪಿ. ಸಪಲ್ಯರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0
16

ಕ್ಯಾಂಟೀನ್‌ನಲ್ಲಿ ದುಡಿದು ಶಿಕ್ಷಣ ಪಡೆದ ಸಾಧಕನಿಗೆ ಬಹುಮುಖ ಸೇವೆಗಾಗಿ ಗೌರವ

ಬಂಟ್ವಾಳ: ಆರ್ಥಿಕ ಸಂಕಷ್ಟದ ನಡುವೆಯೂ ಛಲ ಬಿಡದೆ ರಾತ್ರಿ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿ ಎಂಬಿಎ ಹಾಗೂ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪದವಿ ಪಡೆದ ರಾಯಿ ಗ್ರಾಮದ ಸಾಧಕ ಶ್ರೀನಿವಾಸ ಪಿ. ಸಪಲ್ಯ ಅವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ರಾಯಿ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ಉದ್ಯೋಗ ಅರಸಿ ಮುಂಬೈಗೆ ತೆರಳಿದ ಇವರು, ಅಲ್ಲಿನ ಪೋರ್ಟ್ ಮಿಲಿಟರಿ ಕ್ಯಾಂಟೀನ್ ಸೇರಿದಂತೆ ವಿವಿಧ ಕಡೆಗಳಲ್ಲಿ ದುಡಿಯುತ್ತಾ ಶಿಕ್ಷಣ ಮುಂದುವರಿಸಿದರು. ಮುಂಬೈನ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಕನ್ನಡ ಭವನ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಪ್ರತಿಷ್ಠಿತ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಬಳಿಕ ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‌ಬಿ) ಸಂಸ್ಥೆಯಲ್ಲಿ ಎಂಬಿಎ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಪದವಿಯನ್ನು ಪೂರ್ಣಗೊಳಿಸಿ ಸಾಧನೆಯ ಶಿಖರವೇರಿದರು.

ಪ್ರಸ್ತುತ ಮುಂಬೈನ ಜೆ.ಬಿ. ಅಡ್ವಾಣಿ ಕಂಪನಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಅವರು ಉದ್ಯೋಗದ ಜೊತೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಮುಂಬೈನ ಬೊರಿವಿಲಿ ತುಳು ಸಂಘ, ಮಾಟುಂಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘ ಹಾಗೂ ಮಲಾಡ್ ಶನಿ ಮಹಾತ್ಮಾ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಕಲಾವಿದ ಹಾಗೂ ಭಾಗವತರಾಗಿಯೂ ಗುರುತಿಸಿಕೊಂಡಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಮಹಾರಾಷ್ಟ್ರ ರಾಜ್ಯದಲ್ಲಿ ಗಾಣಿಗ ಸಮುದಾಯವನ್ನು ಹಿಂದುಳಿದ ವರ್ಗ (ಎ) ಮೀಸಲಾತಿಗೆ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಸಾಮಾಜಿಕ ಸೇವೆಯಲ್ಲೂ ಮುಂಚೂಣಿ

ಪ್ರತಿವರ್ಷ ನೂರಾರು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುವುದು, ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವುದು, ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಹಾಗೂ ಪಡಿತರ ಸಾಮಗ್ರಿ ವಿತರಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ಸೇವೆಯನ್ನು ಗುರುತಿಸಿ ಮುಂಬೈ ವಿಶ್ವವಿದ್ಯಾನಿಲಯ ಗೌರವಾರ್ಪಣೆ ಸಲ್ಲಿಸಿದೆ. ಜಯ ಸುವರ್ಣ ಸಮಾಜ ರತ್ನ ಪ್ರಶಸ್ತಿ, ಪುಂಜಾಲಕಟ್ಟೆ ಸ್ವಸ್ತಿಶ್ರೀ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ಮುಂಬೈ ಪದ್ಮಶಾಲಿ ಸೊಸೈಟಿ ಸೇರಿದಂತೆ ಹಲವು ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ.

ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವಗ್ಗ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ, ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ, ಮಂಜೇಶ್ವರ ಶ್ರೀ ಕೀರ್ತೇಶ್ವರ ದೇವಸ್ಥಾನ, ಆದ್ಯಪಾಡಿ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಪುತ್ತೂರು ಬೆಟ್ಟ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಮಹತ್ತರ ಕೊಡುಗೆ ನೀಡಿದ್ದಾರೆ.

ಶಿಕ್ಷಣದ ಕಷ್ಟ ಅರಿತ ಸಾಧಕ

ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಕೆ. ರಮೇಶ್ ನಾಯಕ್ ರಾಯಿ ಅವರು, ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಶ್ರೀನಿವಾಸ ಅವರ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವರ ಸಹೋದರ ಮಧುಕರ ಬಂಗೇರ ರಾಯಿ ಮಾತನಾಡಿ, ಬಾಲ್ಯದಲ್ಲಿ ಶಿಕ್ಷಣ ಪಡೆಯಲು ತಾವು ಅನುಭವಿಸಿದ ಕಷ್ಟವನ್ನು ಇತರ ಬಡ ಮಕ್ಕಳು ಅನುಭವಿಸಬಾರದು ಎಂಬ ಕಳಕಳಿ ಶ್ರೀನಿವಾಸ ಅವರಲ್ಲಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪರಿಸರದಲ್ಲಿ ಆರಂಭವಾದ ಬದುಕಿನ ಪಯಣವನ್ನು ಕಠಿಣ ಪರಿಶ್ರಮ, ಶಿಕ್ಷಣ ಹಾಗೂ ಸಮಾಜಸೇವೆಯ ಮೂಲಕ ಯಶಸ್ಸಿನ ಹಾದಿಗೆ ಕೊಂಡೊಯ್ದಿರುವ ಶ್ರೀನಿವಾಸ ಪಿ. ಸಪಲ್ಯ ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ.