ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ‘ಶ್ರೀ ಮಹಾಧನ್ವಂತರಿ ಯಾಗ’ದ ಸಿದ್ಧತೆ : ಕಾರ್ಯಾಲಯದ ಶುಭಾರಂಭ!

0
7

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ದೀಪ ಪ್ರಜ್ವಲನೆ ಹಾಗೂ ಆಶೀರ್ವಚನ

ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಶ್ರೀ ಮಹಾಧನ್ವಂತರಿ ಯಾಗ’ದ ಪ್ರಚಾರ ಹಾಗೂ ಪೂರ್ವಸಿದ್ಧತೆಗಳಿಗಾಗಿ ಪೇಜಾವರ ಮಠದ ಹಿಂಭಾಗದಲ್ಲಿ ನೂತನವಾಗಿ ಆರಂಭಿಸಲಾದ ಕಾರ್ಯಾಲಯದ ಉದ್ಘಾಟನಾ ಸಮಾರಂಭವು ದಿನಾಂಕ 9 ನವೆಂಬರ್ 2026 ರಂದು ಸಂಜೆ ಅತ್ಯಂತ ಭಾವಪೂರ್ಣ ಮತ್ತು ದಿವ್ಯ ವಾತಾವರಣದಲ್ಲಿ ನೆರವೇರಿತು. ಪ್ರಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾಧನ್ವಂತರಿ ಯಾಗ ಸ್ವಾಗತ ಸಮಿತಿಯ ಸಂಚಾಲಕರಾದ ಶ್ರೀ.ಗುರುಪ್ರಸಾದ್ ಗೌಡ ಅವರು, ಈಗಾಗಲೇ ಯಾಗದ ಸಿದ್ಧತೆಗಳಿಗಾಗಿ ಮೂರು ಪೂರ್ವಭಾವಿ ಸಭೆಗಳು ನಡೆದಿದ್ದು, ಯಾಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳು, ಧರ್ಮಪ್ರೇಮಿಗಳು ಕೈಜೋಡಿಸಿದ್ದಾರೆ.ಆ ನಿಟ್ಟಿನಲ್ಲಿ ಯಾಗದ ಪ್ರಸಾರ ಕಾರ್ಯ ಇನ್ನೂ ವೇಗವಾಗಿ ನಡೆಯಲು ಒಂದು ತಾತ್ಕಾಲಿಕ ಕಚೇರಿಯನ್ನು ಮಾಡಿ,ಅದರ ಮೂಲಕ ಪ್ರತಿ ದಿನವೂ ಎಲ್ಲರೂ ಸೇರಿ ಯಾಗ ಕಾರ್ಯಕ್ರಮದ ಪ್ರಸಾರ ಮತ್ತು ಇತರ ಸಿದ್ಧತೆಗಳ ವೇಗವನ್ನು ಹೆಚ್ಚಿಸಬಹುದು ಮತ್ತು ಅದಕ್ಕಾಗಿ ಇವತ್ತು ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ನಡೆಯುತ್ತಿದೆ ಎಂದು ತಿಳಿಸಿದರು.

ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ, ಕಾರ್ಯಾಲಯವನ್ನು ಉದ್ಘಾಟಿಸಿ ಆಶೀರ್ವದಿಸಿದರು.  ಈ ಶುಭ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೂಜ್ಯ ಸ್ವಾಮೀಜಿಯವರು, “ಲೋಕಕಲ್ಯಾಣ ಹಾಗೂ ಧರ್ಮಸಂಸ್ಥಾಪನೆಯ ಉದ್ಧೇಶದಿಂದ ನಡೆಯುವ ಇಂತಹ ಸಾತ್ತ್ವಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮತೇಜಸ್ಸನ್ನು ಹೆಚ್ಚಿಸುತ್ತವೆ. ಸಾರ್ವಜನಿಕರ ಆರೋಗ್ಯ ವೃದ್ಧಿ ಮತ್ತು ಸದ್ಭಾವನೆಗಾಗಿ ಹಮ್ಮಿಕೊಳ್ಳಲಾಗಿರುವ ಈ ಮಹಾಯಾಗವು ಯಶಸ್ವಿಯಾಗಿ ನೆರವೇರಲಿ,” ಎಂದು ಶುಭಹಾರೈಸಿದರು.

ಉಡುಪಿಯಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಈ ಮಹಾ ಧನ್ವಂತರಿ ಯಾಗದ ಲಾಭವನ್ನು ಪ್ರತಿಯೊಬ್ಬ ಧರ್ಮಾಭಿಮಾನಿಯೂ ಪಡೆದುಕೊಳ್ಳಬೇಕು ಮತ್ತು ಈಗಾಗಲೇ ಸುಮಾರು 6 ಸಾವಿರಕ್ಕಿಂತಲೂ ಹೆಚ್ಚು ಜನರು ಯಾಗಕ್ಕೆ ಬರಲು ತಮ್ಮ  ನೋಂದಣಿ ಮಾಡಿದ್ದಾರೆ   ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್ ನಾಯಕ್ ಅವರು ತಿಳಿಸಿದರು.

ಯಾಗ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ವಿಜಯ ಕೊಡವೂರು ಅವರು ಮಾತನಾಡಿ, ಸಮಾಜದ ಎಲ್ಲಾ ಸಂಘಟನೆಗಳನ್ನು ಆಮಂತ್ರಿಸಲು ಹೇಗೆ ನಿಯೋಜನೆಯನ್ನು ಮಾಡಿದ್ದೇವೆ ಮತ್ತು ಅದನ್ನು ಕಾರ್ಯರೂಪಕ್ಕೆ ಹೇಗೆ ತರಬೇಕು ಎಂಬುವುದರ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ , ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ಆಯೋಜನಾ ಸಮಿತಿಯ ಸಂಚಾಲಕರಾದ ಗುರುಪ್ರಸಾದ್ ಗೌಡ ಹಾಗೂ ಹಲವಾರು ಧರ್ಮಾಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.