ಬಿಸಿಸಿಐ ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡದಲ್ಲಿ ಉಡುಪಿಯ ನಿಶ್ಚಿತ್ ನಾಗರಾಜ್ ಪೈ ಆಯ್ಕೆ

0
2

ಉಡುಪಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ), ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ವತಿಯಿಂದ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉಡುಪಿಯ ಯುವ ಕ್ರಿಕೆಟಿಗ ನಿಶ್ಚಿತ್ ನಾಗರಾಜ್ ಪೈ ಅವರು ಬಿಸಿಸಿಐ ಅಂಡರ್-23 ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

2026-27ನೇ ಸಾಲಿನ ಬಿಸಿಸಿಐ ಮೆನ್ಸ್ ಅಂಡರ್-23 ಟಿ-20 ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯು ಡಿಸೆಂಬರ್ 1ರಿಂದ 13ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ನಿಶ್ಚಿತ್ ನಾಗರಾಜ್ ಪೈ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಈ ಹಿಂದೆ ಬಿಸಿಸಿಐ ಮೆನ್ಸ್ ಅಂಡರ್-19 ಕ್ರಿಕೆಟ್ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ನಿಶ್ಚಿತ್, ಇದೀಗ ಅಂಡರ್-23 ತಂಡಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.

ಇವರು ಉಡುಪಿಯ ಕೆ. ನಾಗರಾಜ್ ಪೈ ಹಾಗೂ ಉಜ್ವಲ್ ಕಿರಣ್ ದಂಪತಿಯ ಪುತ್ರರಾಗಿದ್ದಾರೆ.

ನಿಶ್ಚಿತ್ ಅವರ ಈ ಆಯ್ಕೆಯಿಂದ ಉಡುಪಿ ಜಿಲ್ಲೆಯ ಕ್ರೀಡಾಭಿಮಾನಿಗಳು ಹಾಗೂ ಕ್ರಿಕೆಟ್ ವಲಯದಲ್ಲಿ ಸಂತಸ ವ್ಯಕ್ತವಾಗಿದ್ದು, ಮುಂಬರುವ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.