ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಹೃದಯಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ 40 ದಿನಗಳ ಅಂತರದಲ್ಲಿ ಬರೋಬ್ಬರಿ 23 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಹಾಸನದಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ 23 ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿರುವುದು ಜಿಲ್ಲೆಯ ಜನರಲ್ಲಿ ಮತ್ತು ರಾಜ್ಯದ ಜನತೆಯಲ್ಲಿ ತೀವ್ರ ಆತಂಕವನ್ನು ಹೆಚ್ಚಿಸಿದ್ದು, ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ ನಾಲ್ವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಕೊರೊನಾ ನಂತರ ಜನರ ಆರೋಗ್ಯ ಸಮಸ್ಯೆ ತೀವ್ರವಾಗಿ ಆರೋಗ್ಯ ಹದಗೆಡುತ್ತಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಹಲವು ಯುವಕರು ಬಲಿಯಾಗುತ್ತಿದ್ದಾರೆ. ಹಾಸನದಲ್ಲಿ ಹೃದಯಾಘಾತಕ್ಕೆ ಸರಣಿ ಸಾವು ಸಂಭವಿಸುತ್ತಿರುವುದರ ಕುರಿತು ತನಿಖೆ ನಡೆಸಲು ಸಮಿತಿಯನ್ನೂ ಸಹ ಈಗಾಗಲೇ ರಾಜ್ಯ ಸರ್ಕಾರ ರಚಿಸಿದೆ. ಇಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಂಡಿರುವ ಹೃದಯಾಘಾತದ ಸಮಸ್ಯೆ ಕೇವಲ ಹಾಸನ ಮಾತ್ರವಲ್ಲದೇ ಚಿತ್ರದುರ್ಗ ಜಿಲ್ಲೆಯಲ್ಲೂ ಕಾಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋಟೆನಾಡು ಚಿತ್ರದುರ್ಗದ ಜನತೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಕಳೆದ ಒಂದು ತಿಂಗಳಲ್ಲಿ ಹಾಸನದಲ್ಲಿ 23 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಜೂನ್ ತಿಂಗಳೊಂದರಲ್ಲಿಯೇ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಂಬಾಳಿಮಠ ತಿಳಿಸಿದ್ದಾರೆ. ಈ ಪೈಕಿ ಚಿತ್ರದುರ್ಗ ನಗರದಲ್ಲಿ ನಾಲ್ವರು, ಮೊಳಕಾಲೂರಿನಲ್ಲಿ ನಾಲ್ವರು, ಹೊಸದುರ್ಗದಲ್ಲಿ ಓರ್ವ, ಚಳ್ಳಕೆರೆಯಲ್ಲಿ ಇಬ್ಬರು ಹಾಗೂ ಹಿರಿಯೂರಿನಲ್ಲಿ ಮೂವರು ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ ಇಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.