ಉಡುಪಿ : ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ಮನವಿ ಮತ್ತು ಸಾರ್ವಜನಿಕರ ದೂರಿನ ಬೆನ್ನಲ್ಲೇ ಮಲ್ಪೆಯ ಸೀ ವಾಕ್ ಹಾಗೂ ಮಕ್ಕಳ ಉದ್ಯಾನವನದಲ್ಲಿ ವ್ಯಾಪಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಪ್ರವಾಸೋದ್ಯಮ ಇಲಾಖೆ, ನಗರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಸದ ರಾಶಿ, ಬಿಯರ್ ಬಾಟಲಿಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿದ್ದಾರೆ.

ಮಲ್ಪೆ ಬೀಚ್ನ ಸೀ ವಾಕ್ ಹಾಗೂ ಮಕ್ಕಳ ಉದ್ಯಾನವನದಲ್ಲಿ ಹಲವು ದಿನಗಳಿಂದ ಕಸ, ಮದ್ಯದ ಬಾಟಲಿಗಳು ಮತ್ತು ತ್ಯಾಜ್ಯ ವಸ್ತುಗಳು ರಾಶಿಯಾಗಿದ್ದು, ಸಾರ್ವಜನಿಕರು, ಪ್ರವಾಸಿಗರು ಹಾಗೂ ಮಕ್ಕಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿತ್ತು. ಸ್ವಚ್ಛತೆಯ ಕೊರತೆಯಿಂದ ಪರಿಸರ ಹದಗೆಟ್ಟಿದ್ದು, ಪ್ರವಾಸಿಗರಲ್ಲೂ ಅಸಮಾಧಾನ ಮೂಡಿಸಿತ್ತು.
ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳದಲ್ಲಿ ಸ್ವಚ್ಛತಾ ಕಾರ್ಯಾಚರಣೆ ನಡೆಸಿ ಪರಿಸರವನ್ನು ಶುಚಿಗೊಳಿಸಿದ್ದಾರೆ. ಈ ಕ್ರಮಕ್ಕೆ ಸತೀಶ್ ಪೂಜಾರಿ ಕೀಳಂಜೆ ಅವರು ಉಡುಪಿ ಜನತೆಯ ಪರವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಆದರೆ ಮಲ್ಪೆ ಸೀ ವಾಕ್ ಪ್ರದೇಶದಲ್ಲಿ ಇನ್ನೂ ಹಲವು ಮೂಲಭೂತ ಸಮಸ್ಯೆಗಳು ಬಾಕಿ ಉಳಿದಿವೆ ಎಂದು ಅವರು ಗಮನ ಸೆಳೆದಿದ್ದಾರೆ. ಸೀ ವಾಕ್ನ ಎರಡೂ ಬದಿಯ ಗ್ರಾನೈಟ್ ಕಲ್ಲುಗಳು ಹಾಳಾಗಿದ್ದು, ಇಂಟರ್ಲಾಕ್ ಅಳವಡಿಕೆ ಕುಸಿದಿದೆ. ಅಲ್ಲದೆ, ಕಸದ ನಿರ್ವಹಣೆ, ಭದ್ರತೆ, ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ ಕುಡುಕರ ಹಾವಳಿ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸೋದ್ಯಮ ಇಲಾಖೆಗೆ ಮಲ್ಪೆ ಬೀಚ್ನಿಂದ ವರ್ಷಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದ್ದರೂ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವ ನಿಟ್ಟಿನಲ್ಲಿ ಮಲ್ಪೆ ಬೀಚ್ ಅನ್ನು ಸುಸಜ್ಜಿತ, ಸುರಕ್ಷಿತ ಹಾಗೂ ಸ್ವಚ್ಛ ಪ್ರವಾಸಿ ತಾಣವನ್ನಾಗಿ ರೂಪಿಸಬೇಕೆಂದು ಸಾರ್ವಜನಿಕರ ಪರವಾಗಿ ಆಗ್ರಹಿಸಲಾಗಿದೆ.

