
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಡಸೂರು ಗ್ರಾಮದ ಗುಡ್ಡೆಕೊಪ್ಪದಲ್ಲಿ ಈ ಒಕ್ಕೈ ಮಾಸ್ತಿಕಲ್ಲು ಪತ್ತೆಯಾಗಿದೆ. ಇದನ್ನು ವೈಕುಂಠ ಸಮಾರಾಧನೆ ಸಿನೆಮಾ ನಾಯಕ ನಟ, ನಿರ್ದೇಶಕ ಸಂತೋಷ್ ಗೇರ್ಗಲ್ ಇವರು ಪತ್ತೆ ಹಚ್ಚದ್ದಾರೆ. ಈ ಕಲ್ಲು ಇವರ ಮನೆಯ ಸಮೀಪ ಕಂಡುಬoದಿದ್ದು ಈ ವಿಚಾರವನ್ನು ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ ಕೊಟ್ರೇಶ್ ರವರಲ್ಲಿ ಸಂಶೋಧನಾರ್ಥಿಯಾಗಿರುವ ವೈಶಾಲಿ ಜಿ. ಆರ್ ಇವರ ಗಮನಕ್ಕೆ ತಂದದ್ದಾರೆ.
ಈ ಕಲ್ಲಿನಲ್ಲಿ ಸ್ತ್ರೀಯು ತನ್ನ ಬಲ ಕೈಯನ್ನು ಮೇಲಕ್ಕೆತ್ತಿರುವ ಈ ಶಿಲ್ಪವನ್ನು ಒಕ್ಕೈ ಮಾಸ್ತಿಕಲ್ಲೆನ್ನುತ್ತಾರೆ.ಇಲ್ಲಿ ಕೈಗೆ ತೋಳ್ಬಳೆ ,ಕೈಬಳೆಯನ್ನು ಕೆತ್ತಲಾಗಿದೆ. ಈ ಶಿಲ್ಪ ಸುಮಾರು ಎರೆಡು ಅಡಿ ಅಗಲವಿದ್ದು,ಬಲಭಾಗವು ಉದ್ದದಲ್ಲಿ ಒಂದು ಕಾಲು ಅಡಿ ಇದೆ.ಎಡಭಾಗವು ಉದ್ದದಲ್ಲಿ ಎರೆಡು ಅಡಿಯಷ್ಟಿದೆ. ಒಕ್ಕೈ ಪಕ್ಕದಲ್ಲಿ ಅಷ್ಟದಳ ಪದ್ಮದ ಕೆತ್ತನೆ ಇದೆ. ಒಕ್ಕೈ ಮಾಸ್ತಿಕಲ್ಲಿನ ಎಡಭಾಗದಲ್ಲಿ ಸ್ತ್ರೀ ಮತ್ತು ಪುರುಷ ಶಿಲ್ಪಗಳು ಕುಳಿತ ಭಂಗಿಯಲ್ಲಿ ಕೆತ್ತಲ್ಪಟ್ಟಿದ್ದು, ಪುರುಷನು ಎಡ ಕೈನಲ್ಲಿ ಕತ್ತಿಯೊಂದನ್ನು ಹಿಡಿದಿದ್ದಾನೆ. ಸ್ತ್ರೀ ಶಿಲ್ಪದಲ್ಲಿ ಕೈಮುಗಿದ ಕೆತ್ತನೆ ಇದೆ.ಅದರ ಕೇಳಭಾಗ 32 ಗೆರೆಗಳುಳ್ಳ ಹೂವಿನ ಕೆತ್ತನೆ ಇದೆ.ಯುದ್ದದಲ್ಲಿ ಮಡಿದ ವೀರನ ಪತ್ನಿಯು ಸಹಗಮನ ಮಾಡಿದ ಹಿನ್ನಲೆಯಲ್ಲಿ ಈ ಕಲ್ಲನ್ನು ಹಾಕಿದಂತಿದೆ. ಇದು ಸುಮಾರು 14 ರಿಂದ 15 ನೇ ಶತಮಾನದ್ದಾಗಿ ಕಾಣುತ್ತಿದೆ. ಈ ಕಲ್ಲಿನ ವಿಶೇಷವಿಂದರೆ ವಕ್ಕೈ ಮಾಸ್ತಿಕಲ್ಲಿನ ಸ್ತ್ರೀ ಪುರುಷ ಕೆತ್ತನೆಯ ಅಕ್ಕಪಕ್ಕ ಭಾಗದಲ್ಲಿ ಎರೆಡು ಕಂಬಗಳಂತೆ ಇದ್ದು ಅವುಗಳ ಮೇಲೆ ವ್ಯಕ್ತಿಚಿತ್ರಗಳ ಕೆತ್ತನೆ ಕಂಡು ಬಂದಿದೆ.ಹಾಗೆಯೇ ಈ ಮಾಸ್ತಿಕಲ್ಲಿಗೆ ಕಲ್ಲಿನ ಕಟ್ಟೆಯನ್ನು ಕಟ್ಟಿದ್ದು ಕಾಲನ ಹೊಡೆತಕ್ಕೆ ಸಿಕ್ಕಿ ಆ ಕಲ್ಲುಗಳು ಇದೇ ಮಾಸ್ತಿಕಲ್ಲಿನ ಸುತ್ತಮುತ್ತ ಉರುಳಿಬಿದ್ದಿದ್ದು ಈ ಕಲ್ಲಿನ ಮೇಲೆ ಹುತ್ತಗಳು ಬೆಳೆದಿತ್ತು.ಈ ಶಿಲ್ಪದಿಂದ ಒಂದು ಮಾರು ಅಂತರದಲ್ಲಿ ವಿಶಾಲವಾದ ಕಲ್ಲಿನ ಕಟ್ಟೆಯೊಂದು ಕಂಡುಬಂದಿರುವುದು ಇಲ್ಲಿನ ಜನರಲ್ಲಿ ಅಚ್ಚರಿ ಮೂಡಿಸಿದೆ.
ಈ ವಕ್ಕೈ ಮಾಸ್ತಿಕಲ್ಲು ದಾಖಲಾಗಿಲ್ಲವೆಂದು ಪುರಾತತ್ವ ಇಲಾಖೆಯ ಡಾ. ತೇಜೇಶ್ವರ್ ರವರು ತಿಳಿಸಿದ್ದಾರೆ.
ಈ ಕಾರ್ಯದಲ್ಲಿ ತುಮಕೂರು ವಿ.ವಿ ಸಂಶೋಧನಾರ್ಥಿ ಶಶಿಕುಮಾರ್ ನಾಯ್ಕ್, ಕುಮಾರ್ ಆರ್, ಮೌರ್ಯ ಗೇರ್ಗಲ್, ಪರ್ವ ಗೇರ್ಗಲ್, ಸಿರಿ ಯಡಿಯಾಳ ಮುಂತಾದವರು ಸಹಕಾರ ನೀಡಿದ್ದಾರೆ