ವಾರ್ಡ್ ಸಭೆಗೆ 15 ಮಂದಿ ಮಾತ್ರ: ಸೌಲಭ್ಯ ಪಡೆದವರು ದೂರ, ವಂಚಿತರಿಗೆ ಧ್ವನಿ ಯಾರದು?

0
2

ಪಾಲಡ್ಕ: ಮೂಡುಬಿದಿರೆ ತಾಲೂಕಿನ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಾರ್ಡ್ ಸಭೆಗೆ ನೂರಾರು ಮನೆಗಳಿದ್ದರೂ ಕೇವಲ ಸುಮಾರು 15 ಮಂದಿ ಗ್ರಾಮಸ್ಥರು ಮಾತ್ರ ಭಾಗವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಗ್ರಾಮ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಸರಕಾರದ ವಿವಿಧ ಸೌಲಭ್ಯಗಳ ಕುರಿತು ಚರ್ಚಿಸಿ, ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಬೇಡಿಕೆ ಸಲ್ಲಿಸಬೇಕಾದ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸದಿರುವ ಬಗ್ಗೆ ಸಭೆಗೆ ಹಾಜರಾದವರು ಅಸಮಾಧಾನ ವ್ಯಕ್ತಪಡಿಸಿದರು.

ಪೂಪಾಡಿಕಲ್ಲು, ಜನತಾನಗರ, ಬಿ.ಟಿ.ರೋಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಮನೆಗಳಿದ್ದು, ಅನೇಕ ಕುಟುಂಬಗಳಿಗೆ ರಸ್ತೆ, ಕುಡಿಯುವ ನೀರು, 9/11, ಕಟ್ಟಡ ಪರವಾನಗಿ, ಡೋರ್ ನಂಬರ್ ಸೇರಿದಂತೆ ಅಗತ್ಯ ಸೌಲಭ್ಯಗಳು ಈಗಾಗಲೇ ದೊರೆತಿವೆ. ಈ ಕಾರಣದಿಂದ ತಮ್ಮ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ ಎಂಬ ಮನೋಭಾವದಿಂದ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.

ಆದರೆ ಇನ್ನೊಂದೆಡೆ, ಹಲವು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಗಾಗಿ ಕಾಯುತ್ತಿರುವ ಕುಟುಂಬಗಳ ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಸುಮಾರು 45 ವರ್ಷಗಳ ಹಿಂದಿನ ರಸ್ತೆಗೆ ಇಂದಿಗೂ ಡಾಂಬರೀಕರಣದ ಭಾಗ್ಯ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಅಳಲು. ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳಿಗಾಗಿ ಸಂಬಂಧಪಟ್ಟವರ ಗಮನ ಸೆಳೆಯಲು ಸಭೆಗೆ ಬರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.
“ನಮ್ಮ ಪ್ರದೇಶಕ್ಕೆ ಸರಕಾರದಿಂದ ಯಾವೆಲ್ಲ ಸೌಲಭ್ಯಗಳು ಬರಬಹುದು? ಗ್ರಾಮ ಪಂಚಾಯತಿಗೆ ಎಷ್ಟು ಅನುದಾನ ಬರುತ್ತದೆ? ಯಾವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು? ನಮ್ಮ ಪ್ರದೇಶದ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು?” ಎಂಬುದನ್ನು ಪ್ರಶ್ನಿಸಿ, ಅಧಿಕಾರಿಗಳ ಮುಂದೆ ಒತ್ತಾಯಿಸುವ ಜವಾಬ್ದಾರಿ ಪ್ರತಿಯೊಬ್ಬ ಗ್ರಾಮಸ್ಥರದ್ದಾಗಿದೆ ಎಂದು ಸಭೆಗೆ ಹಾಜರಾದವರು ಅಭಿಪ್ರಾಯಪಟ್ಟರು.

“ನಮ್ಮ ಕೆಲಸ ಆಗಿದೆ ಎಂದು ಸಭೆಯಿಂದ ದೂರ ಉಳಿದರೆ ಗ್ರಾಮ ಹೇಗೆ ಅಭಿವೃದ್ಧಿಯಾಗುತ್ತದೆ?” ಎಂಬ ಪ್ರಶ್ನೆಯೂ ಕೇಳಿಬಂದಿದೆ. ಒಂದು ಪ್ರದೇಶದ ಅಭಿವೃದ್ಧಿ ಎಂದರೆ ಕೆಲವೇ ಮನೆಗಳಿಗೆ ಸೌಲಭ್ಯ ಸಿಗುವುದಲ್ಲ; ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿಯೊಂದು ಪ್ರದೇಶವೂ ಸಮಾನವಾಗಿ ಅಭಿವೃದ್ಧಿಯಾಗಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.
ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳು ಕೇವಲ ಸರಕಾರಿ ಕಾರ್ಯಕ್ರಮಗಳಲ್ಲ. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನೇರವಾಗಿ ಮಂಡಿಸಲು, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು, ಅನುದಾನದ ಬಳಕೆಯ ಕುರಿತು ಪ್ರಶ್ನಿಸಲು ಹಾಗೂ ತಮ್ಮ ಪ್ರದೇಶದ ಮುಂದಿನ ಅಗತ್ಯಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ದೊರೆಯುವ ಪ್ರಮುಖ ವೇದಿಕೆಗಳಾಗಿವೆ.

ಹೀಗಾಗಿ ಸೌಲಭ್ಯ ಪಡೆದವರು ಮಾತ್ರವಲ್ಲದೆ, ಗ್ರಾಮದಲ್ಲಿರುವ ಪ್ರತಿಯೊಬ್ಬರೂ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು. ವೈಯಕ್ತಿಕ ಸಮಸ್ಯೆ ಪರಿಹಾರವಾದ ಬಳಿಕವೂ ಗ್ರಾಮದ ಸಾಮೂಹಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಳ್ಳಬೇಕು.
“ಇಂದು ನಮ್ಮ ಮನೆಗೆ ರಸ್ತೆ ಇದೆ, ನೀರು ಇದೆ ಎಂದು ಸುಮ್ಮನಿದ್ದರೆ ನಾಳೆ ನಮ್ಮ ಪಕ್ಕದ ಮನೆಯ ಸಮಸ್ಯೆ ನಮ್ಮ ಸಮಸ್ಯೆಯಾಗಬಹುದು. ಗ್ರಾಮದ ಅಭಿವೃದ್ಧಿ ಎಲ್ಲರ ಜವಾಬ್ದಾರಿ. ಒಗ್ಗಟ್ಟಿನಿಂದ ಪ್ರಶ್ನಿಸಿದಾಗ ಮಾತ್ರ ಆಡಳಿತದ ಗಮನ ಸೆಳೆಯಲು ಸಾಧ್ಯ” ಎಂದು ಸಭೆಗೆ ಬಂದ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
“ನಮಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಅನುದಾನಗಳ ಬಗ್ಗೆ ತಿಳಿದುಕೊಂಡು, ಗ್ರಾಮದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತೋಣ. ಗ್ರಾಮ ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರೂ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಭಾಗವಹಿಸಬೇಕು” ಎಂಬುದು ವಂಚಿತ ಗ್ರಾಮಸ್ಥರ ಆಗ್ರಹವಾಗಿದೆ.