ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕನೊಬ್ಬ ಸಮೀಪದ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾದ ದಾರುಣ ಘಟನೆ ಕೊಟ್ಟಾಯಂ ಜಿಲ್ಲೆಯ ಪಿನ್ನಕ್ಕನಾಡ್‌ನ ಸಿಎಂಎಸ್ ಕಾಲೋನಿಯಲ್ಲಿ ನಡೆದಿದೆ.
ಅಲನ್ ಮತ್ತು ಸುನೀಶಾ ದಂಪತಿಯ ಎರಡನೇ ಮಗ ಇವಾನ್ ಅಲೆಕ್ಸ್ ಮೃತಪಟ್ಟ ಬಾಲಕ. ಸಂಜೆ ಸುಮಾರು 3 ಗಂಟೆ ವೇಳೆಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ಏಕಾಏಕಿ ಕಾಣೆಯಾಗಿದ್ದಾನೆ ಎನ್ನಲಾಗಿದೆ.
ಮನೆಯವರು ಬಾಲಕನಿಗಾಗಿ ಹುಡುಕಾಟ ನಡೆಸಿದಾಗ ಸಮೀಪದಲ್ಲಿದ್ದ ತೆರೆದ ಬಾವಿಯಲ್ಲಿ ಬಾಲಕ ಬಿದ್ದಿರುವುದು ಗಮನಕ್ಕೆ ಬಂದಿದೆ. ಬಾವಿಗೆ ಸೂಕ್ತ ಎತ್ತರದ ಸುರಕ್ಷತಾ ತಡೆ ಇರಲಿಲ್ಲ ಎನ್ನಲಾಗಿದೆ.
ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಾಲಕನನ್ನು ಬಾವಿಯಿಂದ ಹೊರತೆಗೆದು ರಕ್ಷಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದನು.
ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ದುಃಖ ಆವರಿಸಿದೆ. ತೆರೆದ ಬಾವಿಗಳ ಸುತ್ತ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.

