ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಮಗ್ರ ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಅಂದಾಜು ₹1,250 ಕೋಟಿ ಅಗತ್ಯವಿದ್ದು, ಈ ಮೊತ್ತವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಉದ್ದಿಮೆಗಳ ಸಮಿತಿಯ 139ನೇ ವರದಿಯನ್ನು ಸಮಿತಿ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಇಂದು ವಿಧಾನ ಪರಿಷತ್ತಿನಲ್ಲಿ ಮಂಡಿಸಿದರು.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವತಿಯಿಂದ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳನ್ನು ಮೇ 27, 2026ರಂದು ಸಮಿತಿ ಸ್ಥಳ ಪರಿಶೀಲನೆ ನಡೆಸಿತ್ತು. ಇದರೊಂದಿಗೆ ಎರಡೂ ಜಿಲ್ಲೆಗಳ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳ ಪ್ರಗತಿಯನ್ನೂ ಪರಿಶೀಲಿಸಿ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ.
ಮಂಗಳೂರಿನ ಒಳಚರಂಡಿ ವ್ಯವಸ್ಥೆಗೆ ₹1,250 ಕೋಟಿ ಅಗತ್ಯ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಹಳೆಯ ಹಾಗೂ ಶಿಥಿಲಾವಸ್ಥೆಯ ಕೆಂಪುಕಲ್ಲಿನ ಮೆಶಿನ್‌ಹೋಲ್‌ಗಳನ್ನು ಬದಲಾಯಿಸುವುದು, ಹಳೆಯ ಸ್ಟೋನ್‌ವೇರ್ ಪೈಪ್‌ಗಳ ಬದಲಿಗೆ ಆರ್‌ಸಿಸಿ ಮೆಶಿನ್‌ಹೋಲ್‌ಗಳು ಹಾಗೂ ಯುಪಿವಿಸಿ, ಆರ್‌ಸಿಸಿ ಮತ್ತು ಡಿಐ ಪೈಪ್‌ಗಳನ್ನು ಅಳವಡಿಸುವುದು ಸೇರಿದಂತೆ ಸಮಗ್ರ ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಅನುದಾನದ ಅಗತ್ಯವಿದೆ ಎಂದು ಸಮಿತಿ ತಿಳಿಸಿದೆ.
ಒಟ್ಟು ₹1,250 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸುವ ಪ್ರಸ್ತಾವನೆ ಇದ್ದು, ಇದರಲ್ಲಿ ಒಳಚರಂಡಿ ಜಾಲದ ಪುನರುಜ್ಜೀವನಕ್ಕೆ ಸುಮಾರು ₹840 ಕೋಟಿ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಹೊಸ ಜಾಲವನ್ನು ಅಭಿವೃದ್ಧಿಪಡಿಸಲು ₹410 ಕೋಟಿ ಅಗತ್ಯವಿದೆ ಎಂದು ತಿಳಿಸಲಾಗಿದೆ.
ಇದರೊಂದಿಗೆ ಒಳಚರಂಡಿ ಸಂಸ್ಕರಣಾ ಘಟಕಗಳ ಉನ್ನತೀಕರಣ, ವೆಟ್‌ವೆಲ್‌ಗಳ ನಿರ್ಮಾಣ ಹಾಗೂ ಸಂಸ್ಕರಿಸಿದ ನೀರಿನ ಮರುಬಳಕೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದನ್ನೂ ಯೋಜನೆಯಲ್ಲಿ ಸೇರಿಸಲು ಶಿಫಾರಸು ಮಾಡಲಾಗಿದೆ.
ನಂದಿನಿ ನದಿ ರಕ್ಷಣೆಗೂ ಒತ್ತು
ಜೇಳೂರು ಗ್ರಾಮದ ಕಂದೇವು ಪ್ರದೇಶದ ಸಾಂಸ್ಕೃತಿಕ ಮಹತ್ವವನ್ನೂ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ನಂದಿನಿ ನದಿಯಲ್ಲಿ ಪ್ರತಿವರ್ಷ ನಡೆಯುವ ಸುಮಾರು 800 ವರ್ಷಗಳಷ್ಟು ಹಳೆಯ ಸಾಂಪ್ರದಾಯಿಕ ಸಮುದಾಯ ಮೀನುಗಾರಿಕೆ ಹಬ್ಬ ‘ಕಂದೇವು ಆಯನ’ ಇಂದು ಜಲಮಾಲಿನ್ಯದ ಪರಿಣಾಮ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸರಿಯಾಗಿ ಸಂಸ್ಕರಿಸದ ಕೊಳಚೆ ನೀರು ನೇರವಾಗಿ ನದಿಗೆ ಸೇರುತ್ತಿರುವುದರಿಂದ ಅಂತರ್ಜಲ ಮಾಲಿನ್ಯ, ಪಾಚಿ ಮತ್ತು ಜಲಸಸ್ಯಗಳ ಅತಿಯಾದ ಬೆಳವಣಿಗೆ ಹಾಗೂ ಮೀನುಗಳ ಸಾಮೂಹಿಕ ಸಾವಿನಂತಹ ಸಮಸ್ಯೆಗಳು ಉಂಟಾಗುತ್ತಿವೆ. ಹೀಗಾಗಿ ನಂದಿನಿ ನದಿಯನ್ನು ಮಾಲಿನ್ಯದಿಂದ ರಕ್ಷಿಸುವುದು ಹಾಗೂ ಸಾಂಪ್ರದಾಯಿಕ ಮೀನುಗಾರಿಕೆ ಹಬ್ಬವನ್ನು ಮುಂದಿನ ಪೀಳಿಗೆಗೂ ಉಳಿಸುವುದು ಅಗತ್ಯ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸಂಸ್ಕರಿಸಿದ ನೀರಿನ ಮರುಬಳಕೆಗೆ ಶಿಫಾರಸು
ಮಂಗಳೂರಿನ ವಿವಿಧ ಜಲ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ಪ್ರಸ್ತುತ ರಾಜಕಾಲುವೆಗಳ ಮೂಲಕ ನದಿಗಳಿಗೆ ಹರಿಸಲಾಗುತ್ತಿರುವುದರಿಂದ ಜಲಮೂಲಗಳು ಕಲುಷಿತಗೊಳ್ಳುವ ಸಾಧ್ಯತೆಯಿದೆ ಎಂದು ಸಮಿತಿ ಗಮನಿಸಿದೆ.
ಹೀಗಾಗಿ ಸಂಸ್ಕರಿಸಿದ ನೀರನ್ನು ಸಂಪೂರ್ಣವಾಗಿ ಮರುಬಳಕೆ ಮಾಡುವ ವ್ಯವಸ್ಥೆ ರೂಪಿಸಬೇಕು. ಸಮಗ್ರ ಒಳಚರಂಡಿ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವಾಗ ಸಂಸ್ಕರಿಸಿದ ನೀರಿನ ಮರುಬಳಕೆಗೆ ಅಗತ್ಯವಿರುವ ಕಾಮಗಾರಿಗಳನ್ನೂ ಸೇರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಹಳೆಯ ಕಾಮಗಾರಿಗಳ ಲೋಪ ಮರುಕಳಿಸದಂತೆ ಎಚ್ಚರಿಕೆ
ಈಗಾಗಲೇ ಕೈಗೊಳ್ಳಲಾಗಿರುವ ಒಳಚರಂಡಿ ಕಾಮಗಾರಿಗಳಲ್ಲಿ ಹಲವು ನ್ಯೂನತೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ಹೊಸ ಸಮಗ್ರ ಯೋಜನೆಯಲ್ಲಿ ಅಂತಹ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸಮಿತಿ ಸೂಚಿಸಿದೆ. ಅನಗತ್ಯ ವೆಚ್ಚ ಹಾಗೂ ಸಾರ್ವಜನಿಕ ಹಣದ ದುಂದು ಬಳಕೆಯನ್ನು ತಡೆಯುವಂತೆ ಯೋಜನೆ ರೂಪಿಸಬೇಕೆಂದು ತಿಳಿಸಲಾಗಿದೆ.
ಮಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆ, ವೇಗವಾಗಿ ನಡೆಯುತ್ತಿರುವ ನಗರೀಕರಣ ಹಾಗೂ ಹೆಚ್ಚುತ್ತಿರುವ ನೈರ್ಮಲ್ಯ ಅಗತ್ಯಗಳನ್ನು ಪರಿಗಣಿಸಿ ಗುರುತಿಸಲಾದ ಪ್ರದೇಶಗಳಲ್ಲಿ ಭೂಗತ ಒಳಚರಂಡಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಜಲಮೂಲಗಳ ಮಾಲಿನ್ಯ, ಅನೈರ್ಮಲ್ಯ, ನೀರು ನಿಲ್ಲುವ ಸಮಸ್ಯೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗುತ್ತಿದೆ. ಯೋಜನೆ ಸಮರ್ಪಕವಾಗಿ ಜಾರಿಯಾದರೆ ಸಾರ್ವಜನಿಕ ಆರೋಗ್ಯ ಸುಧಾರಣೆ, ನೈರ್ಮಲ್ಯ ಮಟ್ಟ ಹೆಚ್ಚಳ ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸರ್ಕಾರಕ್ಕೆ ತ್ವರಿತ ಕ್ರಮಕ್ಕೆ ಶಿಫಾರಸು
ಮಂಗಳೂರು ಮಹಾನಗರ ಪಾಲಿಕೆ ಪ್ರಸ್ತಾವಿಸಿರುವ ₹1,250 ಕೋಟಿ ಮೊತ್ತದ ಸಮಗ್ರ ಒಳಚರಂಡಿ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಉನ್ನತ ಆದ್ಯತೆ ನೀಡಬೇಕು. ಅಗತ್ಯ ಆಡಳಿತಾತ್ಮಕ ಅನುಮೋದನೆ, ಅನುದಾನ ಹಂಚಿಕೆ ಹಾಗೂ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಯೋಜನೆ ಪರಿಣಾಮಕಾರಿಯಾಗಿ ಪೂರ್ಣಗೊಂಡು ಮಂಗಳೂರಿನ ಸಾರ್ವಜನಿಕರಿಗೆ ಶೀಘ್ರ ಪ್ರಯೋಜನ ದೊರೆಯುವಂತೆ ಕಾರ್ಯಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.
ಉಡುಪಿ ಜಿಲ್ಲೆಯ ಕಾಮಗಾರಿಗಳಿಗೂ ಶಿಫಾರಸು
ಉಡುಪಿ ಜಿಲ್ಲೆಯ ಕಾಮಗಾರಿಗಳ ಪರಿಶೀಲನೆಯ ಸಂದರ್ಭದಲ್ಲಿ ಅಗತ್ಯವಿರುವ ಜಮೀನನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಸಮಿತಿ ಸೂಚಿಸಿದೆ. ಇದರಿಂದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಜನರಿಗೆ ಯೋಜನೆಯ ಪ್ರಯೋಜನ ತಲುಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಲಾಗಿದೆ.
ಹಾಲಾಡಿ ನೀರು ಸಂಸ್ಕರಣಾ ಘಟಕದ ಸಮೀಪದ ಕೆಎನ್‌ಎನ್‌ಎಲ್ ಕಾಲುವೆಯಿಂದ ಡಿಸೆಂಬರ್‌ನಿಂದ ಜೂನ್‌ವರೆಗೆ ಮಾತ್ರ ಕಚ್ಚಾ ನೀರು ಪಡೆಯಲು ಅನುಮೋದನೆ ಇರುವ ಹಿನ್ನೆಲೆಯಲ್ಲಿ, ಬಾಕಿ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಜುಲೈ ನಂತರವೂ ಅಗತ್ಯ ನೀರನ್ನು ಬಳಸಲು ಅನುಮತಿ ನೀಡಬೇಕು ಎಂದು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

