ಜಿಲ್ಲಾಸ್ಪತ್ರೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ : ಹೊರಗುತ್ತಿಗೆ ನೌಕರ ಬಂಧನ

0
39

ಬಾಗಲಕೋಟೆ: ಚಿಕಿತ್ಸೆ ಮತ್ತು ಆರೈಕೆಗೆಂದು ಬಂದಿದ್ದ ಮಹಿಳೆಯೊಬ್ಬರ ಮೇಲೆ ಜಿಲ್ಲಾಸ್ಪತ್ರೆಯಲ್ಲೇ ಅತ್ಯಾಚಾರ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೌಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಫರೀದ್ ಸಾಬ್ ಡಾಂಗಿ ಎಂಬಾತ ಆಸ್ಪತ್ರೆಯಲ್ಲಿ ಡಿ-ದರ್ಜೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. 34 ವರ್ಷದ ವಿಧವೆ ಮಹಿಳೆ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಸಹೋದರನ ಆರೈಕೆಗೆ ಆಸ್ಪತ್ರೆಯಲ್ಲಿ ತಂಗಿದ್ದರು. ಇದೇ ವೇಳೆ ಆರೋಪಿ ಮಹಿಳೆಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಧ್ಯರಾತ್ರಿ ಶೌಚಾಲಯಕ್ಕೆ ಎಳೆದು ಕೃತ್ಯ ಎಸಗಿದ ಆರೋಪ

ಮೇ 4ರ ಮಧ್ಯರಾತ್ರಿ 12ರಿಂದ 2 ಗಂಟೆಯ ನಡುವೆ ಆರೋಪಿ ಮಹಿಳೆಗೆ ಬೆದರಿಕೆ ಹಾಕಿ, ಆಸ್ಪತ್ರೆಯ ಶೌಚಾಲಯಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಮಹಿಳೆಯನ್ನು ಒಳಗಡೆಯೇ ಲಾಕ್ ಮಾಡಿ ಆರೋಪಿ ಪರಾರಿಯಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಕುಟುಂಬಸ್ಥರ ಆಕ್ರೋಶ

ಘಟನೆ ತಿಳಿಯುತ್ತಿದ್ದಂತೆ ಸಂತ್ರಸ್ತೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ವಿವಿಧ ಕಲಂಗಳಡಿ ಪ್ರಕರಣ ದಾಖಲು

ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 64, 64(2)(ಇ), 127(2), 351(2) ಹಾಗೂ 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಆರೋಪಿ ಕೆಲಸದಿಂದ ವಜಾ

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಸ್ಪತ್ರೆ ಆಡಳಿತ ಮಂಡಳಿ, ಆರೋಪಿಯನ್ನು ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸಿದೆ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ್ ಕೋಣಿ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಂತಹ ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಥಕವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆಸ್ಪತ್ರೆ ಆವರಣದಲ್ಲಿ ಸಿಸಿಟಿವಿ ನಿಗಾ, ಭದ್ರತಾ ಸಿಬ್ಬಂದಿ ವ್ಯವಸ್ಥೆ ಹಾಗೂ ರಾತ್ರಿ ವೇಳೆಯ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

LEAVE A REPLY

Please enter your comment!
Please enter your name here