ಪಡುಬಿದ್ರಿ: ಶ್ರೀ ದೇಗುಲದಲ್ಲಿ ಕ್ಷೇತ್ರ ಪರಿಚಯ ಪುಸ್ತಕದ ಅನಾವರಣ

0
4


ಪಡುಬಿದ್ರಿ: ಇತಿಹಾಸಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರದಂದು ಪಡುಬಿದ್ರಿ ಕ್ಷೇತ್ರ ಪರಿಚಯದ ಪುಸ್ತಕ ‘ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ’ವನ್ನು ಶ್ರೀ ದೇಗುಲದ ಅನುವಂಶಿಕ ಮೊಕ್ತೇಸರರು ಹಾಗೂ ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.

ಜಾನಪದ ವಿದ್ವಾಂಸರೂ, ಹಿರಿಯ ಪತ್ರಕರ್ತರೂ ಆಗಿರುವ ಕೆ. ಎಲ್‌. ಕುಂಡಂತಾಯ ಅವರು ಸಂಪಾದಿಸಿ ಮುದ್ರಿಸಿರುವ ಈ ಪುಸ್ತಕವು ಪಡುಬಿದ್ರಿ ಕುರಿತಾದ ಪೌರಾಣಿಕ, ಐತಿಹಾಸಿಕ ಹಾಗೂ ಜಾನಪದ ಹಿನ್ನೆಲೆಗಳನ್ನು ಒಳಗೊಂಡಿವೆ. ಇದು ಕುಂಡಂತಾಯರ 112ನೇ ಕ್ಷೇತ್ರ ಪರಿಚಯ ಹಾಗೂ 33ನೇ ಕೃತಿಯಾಗಿದೆ ಎಂದು ಜಾನಪದ ವಿದ್ವಾಂಸ ಡಾ| ವೈ. ಎನ್‌. ಶೆಟ್ಟಿ ಅವರು ಹೇಳಿದರು.
ಸಂಪಾದಕ ಕೆ. ಎಲ್‌. ಕುಂಡಂತಾಯ ಅವರು ಮಾತನಾಡಿ, ತಾನು ಆಡಿ ಬೆಳೆದ ಪರಿಸರದ ದೇವಾಲಯವು ಇದಾಗಿದೆ. ಅದರ ಕುರಿತಾದ ಪರಿಚಯ ಲೇಖನವು ತನ್ನ ಮೂಲಕ ಆಗಿರುವುದೂ ತನಗೆ ಹೆಮ್ಮೆ ಎನಿಸಿದೆ. ಮುಂದೆ ಶ್ರೀ ದೇಗುಲದ ಆಡಳಿತವು ಪರಿಷ್ಕರಣೆಗಳೊಂದಿಗೆ ಈ ಕ್ಷೇತ್ರ ಪರಿಚಯವನ್ನು ಮುದ್ರಿಸಿಕೊಳ್ಳಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅರ್ಚಕ ಎಚ್‌. ಪದ್ಮನಾಭ ಭಟ್‌ ಅವರು ಪ್ರಾರ್ಥಿಸಿ ಶ್ರೀ ದೇವರ ಗಂಧ ಪ್ರಸಾದಗಳನ್ನು ಕೆ. ಎಲ್‌. ಕುಂಡಂತಾಯ ಅವರಿಗಿತ್ತರು. ಶ್ರೀ ದೇಗುಲದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್‌ ಅರಸ್‌ ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಅವರು ಕುಂಡಂತಾಯ ಅವರನ್ನು ಸಮ್ಮಾನಿಸಿದರು.
ನಡ್ಸಾಲುಗುತ್ತು ಶ್ರೀನಾಥ್‌ ಹೆಗ್ಡೆ, ಪೇಟೆಮನೆ ಅನಿಲ್‌ ಶೆಟ್ಟಿ, ಪಿ. ರಾಘವೇಂದ್ರ ನಾವಡ, ಬಾಲಕೃಷ್ಣ ಕೊರ್ನಾಯ, ರಮಾಕಾಂತ ರಾವ್‌, ಶ್ರೀ ಕ್ಷೇತ್ರದ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಕೃಷ್ಣ ಕೆ. ಮತ್ತಿತರರಿದ್ದರು.

LEAVE A REPLY

Please enter your comment!
Please enter your name here