ಪರಾರಿ ಶ್ರೀ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಮೂರು ದಿನಗಳ ವಿಜ್ರಂಭಣೆಯ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಈ ಸಂದರ್ಭದಲ್ಲಿ ಶ್ರೀ ದೈವದ ಕೆಸರು ಕಲ್ಲು ಮುಹೂರ್ತ, ಆಮಂತ್ರಣ ಪತ್ರಿಕೆ ಬಿಡುಗಡೆ, ಹಸಿರು ಹೊರೆ ಕಾಣಿಕೆ ಮತ್ತು ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮಗಳು ಸಹ ಯಶಸ್ವಿಯಾಗಿ ನಡೆದವು.
ಈ ಮಹತ್ವದ ಕಾರ್ಯಕ್ರಮಗಳ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿದವರು ಉಡುಪಿ ಜಿಲ್ಲೆಯ ಖ್ಯಾತ ನಿರೂಪಕರಾದ ಹಾವಂಜೆ ಪ್ರಶಾಂತ್ ಶೆಟ್ಟಿ. ಹಲವು ದೇವಸ್ಥಾನಗಳು ಹಾಗೂ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸಿರುವ ಅವರು, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಅನುಭವವನ್ನು ನಿಸ್ವಾರ್ಥವಾಗಿ ಹಂಚಿಕೊಂಡಿದ್ದಾರೆ.
ಮಕ್ಕಳಿಗೆ ಪ್ರೀತಿಪಾತ್ರ ಅಧ್ಯಾಪಕರಾಗಿರುವ ಪ್ರಶಾಂತ್ ಶೆಟ್ಟಿ, ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿರುವ ಅವರು, ದೊಡ್ಡ ಸಮಸ್ಯೆಗಳನ್ನೂ ಸುಲಭವಾಗಿ ನಿಭಾಯಿಸುವ ನಿರೂಪಣಾ ಕೌಶಲ್ಯದಿಂದ ಪ್ರಸಿದ್ಧರಾಗಿದ್ದಾರೆ.
ಪರಾರಿ ಶ್ರೀ ಬೊಬ್ಬರ್ಯ ಜೀರ್ಣೋದ್ಧಾರ ಸಮಿತಿಯವರು, ಬ್ರಹ್ಮಕಲಶೋತ್ಸವ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ನೀಡಿದ ಅವರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿ, ಸದಾ ಚಿರಋಣಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ಸಮಿತಿಯ ಅಧ್ಯಕ್ಷರಾದ ಗುರುರಾಜ್ ಭಟ್ ಕೊಳಲಗಿರಿ, ಗೌರವಾಧ್ಯಕ್ಷರಾದ ಸತೀಶ್ ಪೂಜಾರಿ ಕೀಳಂಜೆ ಹಾಗೂ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಭಟ್ ಇವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು .

