ಪರಶುರಾಮ ಥೀಮ್ ಪಾರ್ಕ್ ನಿರ್ಜನ : ರಾಜಕೀಯ ಷಡ್ಯಂತ್ರವೇ ಕಾರಣ – ರಾಕೇಶ್ ಶೆಟ್ಟಿ ಆರೋಪ

0
13

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಪ್ರವಾಸೋದ್ಯಮಕ್ಕೆ ಕಿರೀಟಪ್ರಾಯವಾಗಬೇಕಾಗಿದ್ದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡಿದ್ದ ಪರಶುರಾಮ ಥೀಮ್ ಪಾರ್ಕ್ ಇಂದು ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿದ್ದು, ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗುವ ಆತಂಕ ಎದುರಾಗಿದೆ ಎಂದು ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ರಾಕೇಶ್ ಶೆಟ್ಟಿ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕಾರ್ಕಳದ ನಕಲಿ ಕಾಂಗ್ರೆಸ್ ಮುಖಂಡರ ಷಡ್ಯಂತ್ರ ಹಾಗೂ ಅವರ ನಾಯಕರಾದ ಮುನಿಯಾಲು ಉದಯಕುಮಾರ್ ಶೆಟ್ಟಿಯವರ ಕುಕೃತ್ಯದಿಂದಲೇ ಪರಶುರಾಮ ಥೀಮ್ ಪಾರ್ಕ್ ಈ ದುಸ್ಥಿತಿಗೆ ತಲುಪಿದೆ. ಇದು ಕಾರ್ಕಳ ಜನತೆಗೆ ತಿಳಿದಿರುವ ಸತ್ಯ” ಎಂದು ಹೇಳಿದ್ದಾರೆ.

“ಒಂದು ಅಭಿವೃದ್ಧಿ ಯೋಜನೆಯನ್ನು ಹಳ್ಳ ಹಿಡಿಸುವುದು ಯಾವತ್ತೂ ಸಾಧನೆಯಲ್ಲ. ಹೊಸ ಯೋಜನೆಗಳನ್ನು ತಂದು ಪ್ರವಾಸೋದ್ಯಮವನ್ನು ಬೆಳೆಸುವುದೇ ನಿಜವಾದ ಸಾಧನೆ. ಆದರೆ ಕಾರ್ಕಳದ ಕೀರ್ತಿಯನ್ನು ಹೆಚ್ಚಿಸಬೇಕಾಗಿದ್ದ ಯೋಜನೆಯನ್ನು ರಾಜಕೀಯ ಕಾರಣಗಳಿಂದ ಬರಡು ಭೂಮಿಯಂತೆ ಮಾಡಲಾಗಿದೆ” ಎಂದು ಅವರು ಟೀಕಿಸಿದರು.

ಉದಯಕುಮಾರ್ ಶೆಟ್ಟಿಯವರು ಬಯಸಿದ್ದರೆ ಪರಶುರಾಮ ಥೀಮ್ ಪಾರ್ಕ್‌ಗಿಂತಲೂ ಭವ್ಯವಾದ ಮತ್ತೊಂದು ಪ್ರವಾಸೋದ್ಯಮ ಯೋಜನೆಯನ್ನು ಕಾರ್ಕಳಕ್ಕೆ ನೀಡಬಹುದಿತ್ತು. ಆದರೆ ಅದನ್ನು ಬಿಟ್ಟು ಈಗ ತಮ್ಮ ತಪ್ಪು ಅರಿವಾದ ಬಳಿಕ ರಾಜಕೀಯ ಸಭ್ಯತೆ ಮೀರಿದ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದು ರಾಕೇಶ್ ಶೆಟ್ಟಿ ಹೇಳಿದರು.

“ಕಾರ್ಕಳವನ್ನು ಪ್ರೀತಿಸುವವನು ಅದರ ಪ್ರವಾಸೋದ್ಯಮವನ್ನು ಬೆಳೆಸುತ್ತಾನೆ. ತನ್ನ ರಾಜಕೀಯ ಲಾಭಕ್ಕಾಗಿ ಕಾರ್ಕಳದ ಅಭಿವೃದ್ಧಿಗೆ ಅಡ್ಡಿಯಾಗುವುದಿಲ್ಲ. ಸಾಧ್ಯವಾದರೆ ಜನಪರ ಕೆಲಸ ಮಾಡಿ, ಆಗದಿದ್ದರೆ ಅಭಿವೃದ್ಧಿಗೆ ಕೈ ಹಾಕುವವರಿಗೆ ಅಡ್ಡಕಾಲು ಹಾಕಬೇಡಿ” ಎಂದು ಅವರು ಆಗ್ರಹಿಸಿದರು.

ರಾಕೇಶ್ ಶೆಟ್ಟಿ ಕುಕ್ಕುಂದೂರು
ಅಧ್ಯಕ್ಷರು, ಬಿಜೆಪಿ ಯುವಮೋರ್ಚಾ, ಕಾರ್ಕಳ

LEAVE A REPLY

Please enter your comment!
Please enter your name here